ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್‌ನಿಂದ ಭಾರಿ ರಿಲೀಫ್ ಸಿಕ್ಕಿದೆ. ಮೇ 30 ಮತ್ತು 31ರಂದು ನಡೆಯಲಿರುವ 2026ರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಭಾಗವಹಿಸುವುದನ್ನು ಖಚಿತಪಡಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಭಾರತೀಯ ಕುಸ್ತಿ ಒಕ್ಕೂಟ (WFI) ವಿನೇಶ್ ಅವರನ್ನು 'ಅನರ್ಹ' ಎಂದು ಘೋಷಿಸಿದ್ದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಹತ್ವದ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಫೆಡರೇಶನ್ ನಿರ್ಧಾರವನ್ನು ಪ್ರಶ್ನಿಸಿರುವ ನ್ಯಾಯಾಲಯ, ಹಳೆಯ ಆಯ್ಕೆ ಮಾನದಂಡಗಳನ್ನು ದಿಢೀರ್ ಬದಲಾಯಿಸಿರುವುದರ ಹಿಂದೆ ‘ದ್ವೇಷದ ರಾಜಕಾರಣ’ ಅಡಗಿರುವಂತೆ ಕಾಣುತ್ತಿದೆ ಎಂದು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಲ್ಲದೆ, ಮುಂಬರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಅವರು ಭಾಗವಹಿಸುವುದನ್ನು ಖಚಿತಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದು, ವಿನೇಶ್ ಅವರ ಪ್ರಕರಣವನ್ನು ಪರಿಶೀಲಿಸಲು ಮತ್ತು ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ತಜ್ಞರ ಸಮಿತಿಯನ್ನು (Expert Committee) ರಚಿಸುವಂತೆ ಆದೇಶಿಸಿದೆ.
ತಾಯ್ತನ ದೇಶಕ್ಕೆ ಹೆಮ್ಮೆ, ಅದು ಕ್ರೀಡಾಪಟುವಿಗೆ ಮಾರಕವಾಗಬಾರದು
ನಮ್ಮ ದೇಶದಲ್ಲಿ ತಾಯ್ತನವನ್ನು ಸಂಭ್ರಮಿಸಲಾಗುತ್ತದೆ ಮತ್ತು ಗೌರವಿಸಲಾಗುತ್ತದೆ, ಅದನ್ನು ಒಬ್ಬ ಕ್ರೀಡಾಪಟುವಿನ ವೃತ್ತಿಜೀವನಕ್ಕೆ ಮಾರಕವಾಗುವಂತೆ ಬಳಸಿಕೊಳ್ಳಬಾರದು ಎಂದು ಪೀಠವು ಕಟ್ಟುನಿಟ್ಟಾಗಿ ಹೇಳಿದೆ.
ಡಬ್ಲ್ಯುಎಫ್‌ಐ ಧೋರಣೆಗೆ ಹೈಕೋರ್ಟ್ ಆಕ್ರೋಶ
ಇದೇ ವೇಳೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರು ಅನರ್ಹಗೊಂಡಿದ್ದನ್ನು ಫೆಡರೇಶನ್ ತನ್ನ ನೋಟಿಸ್‌ನಲ್ಲಿ "ರಾಷ್ಟ್ರೀಯ ಅವಮಾನ" ಎಂದು ಕರೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವಿನೇಶ್ ಅವರು ಜುಲೈ 2025 ರಲ್ಲಿ ತಾಯಿಯಾಗಿದ್ದು, ಈಗ ಕೇವಲ ಕೆಲವೇ ತಿಂಗಳುಗಳಲ್ಲಿ ದೇಶಕ್ಕಾಗಿ ಮತ್ತೆ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಇಂತಹ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುವನ್ನು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಕ್ರೀಡೆಯಿಂದ ದೂರ ಇಡುವುದು ಸರಿಯಲ್ಲ ಮತ್ತು ಫೆಡರೇಶನ್ ಕ್ರೀಡೆಯ ಹಿತದೃಷ್ಟಿಯಿಂದ ವರ್ತಿಸುತ್ತಿಲ್ಲ ಎಂದು ನ್ಯಾಯಾಲಯ ಖಾರವಾಗಿ ನುಡಿದಿದೆ.
2023 ರಲ್ಲಿ ಅಂದಿನ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಲೈಂಗಿಕ ಕಿರುಕುಳ ವಿರೋಧಿ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್ ಅವರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಲು ಯತ್ನಿಸಲಾಗುತ್ತಿದೆ ಎಂಬ ವಾದಕ್ಕೆ ಕೋರ್ಟ್‌ನ ಈ ನಡೆ ಮತ್ತಷ್ಟು ಬಲ ನೀಡಿದೆ.
ಏನಿದು ಪ್ರಕರಣ..?
ಶಿಸ್ತು ಉಲ್ಲಂಘನೆ ಮತ್ತು ನಿವೃತ್ತಿಯ ನಂತರ ಮರಳಿ ಸ್ಪರ್ಧೆಗೆ ಬರುವ ಪ್ರಕ್ರಿಯೆಗಳನ್ನು ಪಾಲಿಸದ ಆರೋಪದ ಮೇಲೆ ಡಬ್ಲ್ಯೂಎಫ್ಐ ವಿನೇಶ್ ಅವರಿಗೆ ಶೋಕಾಸ್ ನೋಟಿಸ್ ನೀಡಿ, ಜೂನ್ 2026 ರವರೆಗೆ ಸ್ಪರ್ಧಿಸದಂತೆ ತಡೆ ಹೇರಿತ್ತು.
ವಿನೇಶ್ ಫೋಗಟ್ ಅವರು ಶಿಸ್ತು ಉಲ್ಲಂಘನೆ ಮಾಡಿದ್ದಾರೆ ಮತ್ತು ಉದ್ದೀಪನ ಮದ್ದು ತಡೆ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿ ಮೇ 9 ರಂದು ಡಬ್ಲ್ಯುಎಫ್‌ಐ ಅವರಿಗೆ 15 ಪುಟಗಳ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ, ನಿವೃತ್ತಿಯಿಂದ ಮರಳುವ ಅಥ್ಲೀಟ್‌ಗಳಿಗೆ ಅನ್ವಯವಾಗುವ ಆರು ತಿಂಗಳ ಮುನ್ಸೂಚನೆ ಅವಧಿಯ ನಿಯಮವನ್ನು ಉಲ್ಲೇಖಿಸಿ ಜೂನ್ 26 ರವರೆಗೆ ದೇಶೀಯ ಕೂಟಗಳಲ್ಲಿ ಭಾಗವಹಿಸದಂತೆ ಅವರಿಗೆ ನಿಷೇಧ ಹೇರಿತ್ತು.
ಕಳೆದ ವರ್ಷ ಮಗುವಿಗೆ ಜನ್ಮ ನೀಡಿದ್ದ ವಿನೇಶ್, ಡಿಸೆಂಬರ್ 2025 ರಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದರು. ಆದರೆ, WFI ಕೊನೆಯ ಕ್ಷಣದಲ್ಲಿ ನಿಯಮಗಳನ್ನು ಬದಲಾಯಿಸಿ ಇತ್ತೀಚಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳ ಪದಕ ವಿಜೇತರಿಗೆ ಮಾತ್ರ ಟ್ರಯಲ್ಸ್‌ಗೆ ಅವಕಾಶ ನೀಡಿ ವಿನೇಶ್ ಅವರನ್ನು ಹೊರಗಿಟ್ಟಿತ್ತು.
ನಿಯಮಗಳನ್ನು ಕೇವಲ ತಮ್ಮನ್ನು ಗುರಿಯಾಗಿಸಿಕೊಂಡೇ ಬದಲಾಯಿಸಲಾಗಿದೆ ಮತ್ತು ಗರ್ಭಾವಸ್ಥೆಯ ಕಾರಣದಿಂದಾಗಿ ತಾವು ಮಿಸ್ ಮಾಡಿಕೊಂಡಿದ್ದ ದೇಶೀಯ ಪದಕ ವಿಜೇತರಿಗೆ ಮಾತ್ರ ಏಷ್ಯನ್ ಗೇಮ್ಸ್ ಟ್ರಯಲ್ಸ್‌ನಲ್ಲಿ ಅವಕಾಶ ನೀಡುವ ಹೊಸ ನಿಯಮ ರೂಪಿಸಲಾಗಿದೆ ಎಂದು ವಿನೇಶ್ ಆರೋಪಿಸಿದ್ದರು.
ಇದನ್ನು ಪ್ರಶ್ನಿಸಿ ವಿನೇಶ್ ಮೇ 14 ರಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಇಡೀ ವಿವಾದದ ಮುಂದಿನ ವಿಚಾರಣೆಯನ್ನು ಜುಲೈ 6, 2026 ಕ್ಕೆ ನಿಗದಿಪಡಿಸಿದ್ದು, ಅಷ್ಟರೊಳಗೆ ಶೋಕಾಸ್ ನೋಟಿಸ್‌ಗೆ ವಿನೇಶ್ ಸಲ್ಲಿಸುವ ಉತ್ತರವನ್ನು ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳುವಂತೆ ಡಬ್ಲ್ಯೂಎಫ್ಐಗೆ ಸೂಚಿಸಿದೆ.