ನವದೆಹಲಿ: NEET UG ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಶೇ.100ರಷ್ಟು ದೋಷರಹಿತ ಮರು ಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ NEET UG ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕುರಿತು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಪರೀಕ್ಷೆಯಲ್ಲಿ ಅಕ್ರಮಗಳು ಪತ್ತೆಯಾದ ಬಳಿಕ “ಕಠಿಣ ನಿರ್ಧಾರಗಳನ್ನು” ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.
2026ರ ಜಾಗರಣ್ ಭಾರತ್ ಎಜುಕೇಶನ್ ಕಾಂಕ್ಲೇವ್‌ನಲ್ಲಿ ಮಾತನಾಡಿದ ಸಚಿವ ಪ್ರಧಾನ್, “ಎಜುಕೇಷನ್ ಮಾಫಿಯಾ” ಕಾರಣದಿಂದ ಒಬ್ಬ ಅರ್ಹ ವಿದ್ಯಾರ್ಥಿಯೂ ತನ್ನ ವೈದ್ಯಕೀಯ ಸೀಟನ್ನು ಕಳೆದುಕೊಳ್ಳಬಾರದು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ಜೂನ್ 21ರಂದು ನಡೆಯಲಿರುವ NEET UG ಮರುಪರೀಕ್ಷೆಯನ್ನು “100 ಪ್ರತಿಶತ ದೋಷರಹಿತ”ವಾಗಿ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
22 ಲಕ್ಷ ವಿದ್ಯಾರ್ಥಿಗಳಿಗೆ ಮಾನಸಿಕ ಸಂಕಟ
ಪ್ರಶ್ನೆಪತ್ರಿಕೆ ಸೋರಿಕೆ ವಿವಾದದಿಂದ ಸುಮಾರು 22 ಲಕ್ಷ ವಿದ್ಯಾರ್ಥಿಗಳು “ತೀವ್ರ ಮಾನಸಿಕ ವೇದನೆ” ಅನುಭವಿಸಿದ್ದು ಈ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. 22 ಲಕ್ಷ ಮಕ್ಕಳು ಅಪಾರ ಮಾನಸಿಕ ಸಂಕಟವನ್ನು ಅನುಭವಿಸಿದ್ದಾರೆ. ಆ ನೋವನ್ನು ಅರ್ಥಮಾಡಿಕೊಂಡು, ಅದರ ಹೊಣೆಗಾರಿಕೆಯನ್ನು ಸ್ವೀಕರಿಸಿ ನಾನು ಇಂದು ಹೇಳುತ್ತಿದ್ದೇನೆ. ನಮಗೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಯಿತು. ದೋಷ ರಹಿತ ಮರು ಪರೀಕ್ಷೆ ನಡೆಸುತ್ತೇವೆ ಎಂದು ಅವರು ಹೇಳಿದರು.
“ಮೌಲ್ಯಮಾಪನ ಪ್ರಕ್ರಿಯೆ ಹಾನಿಗೊಳಗಾಗಿತ್ತು”
ಕೆಲವು ಮೌಲ್ಯಮಾಪನ ಪ್ರಕ್ರಿಯೆಗಳು ಹಾನಿಗೊಳಗಾಗಿದ್ದವು ಎಂಬ ಮಾಹಿತಿ ದೊರೆತ ಬಳಿಕ ಸರ್ಕಾರ ಪರೀಕ್ಷೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿತು ಎಂದು ಪ್ರಧಾನ್ ಹೇಳಿದರು. “ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಮಾಫಿಯಾದ ಅಕ್ರಮಗಳ ಸಂಚಿನಿಂದ ಒಬ್ಬ ವಿದ್ಯಾರ್ಥಿಯೂ ತನ್ನ ಹಕ್ಕಿನ ಸೀಟನ್ನು ಕಳೆದುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ” ಎಂದು ಅವರು ಹೇಳಿದರು.
ಪ್ರಕರಣ ನಿರ್ವಹಣೆಯಲ್ಲಿ ಸರ್ಕಾರ ಎದುರಿಸುತ್ತಿರುವ ಟೀಕೆಗಳನ್ನು ಒಪ್ಪಿಕೊಂಡ ಪ್ರಧಾನ್, 'ವ್ಯವಸ್ಥೆಯನ್ನು ಸರಿಪಡಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ. ನಾವು ಟೀಕೆ ಮತ್ತು ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ವ್ಯವಸ್ಥೆಯನ್ನು ಸರಿಪಡಿಸುವುದು ನಮ್ಮ ಜವಾಬ್ದಾರಿ. ಸಮಸ್ಯೆಯನ್ನು ನೋಡಿ ಕಣ್ಣು ಮುಚ್ಚಿಕೊಳ್ಳುವುದು ನಮ್ಮ ಕರ್ತವ್ಯವಲ್ಲ' ಎಂದು ಹೇಳಿದರು.
ದೋಷರಹಿತ ಪರೀಕ್ಷೆ
ಜೂನ್ 21ರಂದು ನಡೆಯಲಿರುವ ಮರುಪರೀಕ್ಷೆಯನ್ನು ಸುಗಮವಾಗಿ ಮತ್ತು ಯಾವುದೇ ದೋಷವಿಲ್ಲದಂತೆ ನಡೆಸುವುದು ಸರ್ಕಾರದ ಜವಾಬ್ದಾರಿ ಎಂದು ಶಿಕ್ಷಣ ಸಚಿವರು ಹೇಳಿದರು. 'ಜೂನ್ 21ರಂದು ನಡೆಯಲಿರುವ ಪರೀಕ್ಷೆ 100 ಪ್ರತಿಶತ ದೋಷರಹಿತವಾಗಿರಬೇಕು ಎಂಬುದು ನಮ್ಮ ಹೊಣೆಗಾರಿಕೆ' ಎಂದು ಅವರು ಪುನರುಚ್ಚರಿಸಿದರು.
ಮೇ 3ರಂದು ನಡೆದ ಪರೀಕ್ಷೆ ರದ್ದು
ಇದೇ ವೇಳೆ ಮೇ 3ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG ಅನ್ನು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಹಿನ್ನೆಲೆ ಇತ್ತೀಚೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency) (NTA) ರದ್ದುಪಡಿಸಿತ್ತು. ಈ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (CBI) ನಡೆಸುತ್ತಿದ್ದು, ಮರುಪರೀಕ್ಷೆ ಜೂನ್ 21ರಂದು ನಡೆಯಲಿದೆ.