ನವದೆಹಲಿ: ಕ್ವಾಡ್ ವಿದೇಶಾಂಗ ಸಚಿವರ ಸಭೆಯಲ್ಲಿ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುವ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ವಾಡ್ ರಾಷ್ಟ್ರಗಳು ಈಗ ಕೇವಲ ಚರ್ಚಾ ವೇದಿಕೆಯಾಗಿ ಉಳಿಯದೆ, ಕಾರ್ಯೋನ್ಮುಖ ತಂತ್ರಾತ್ಮಕ ಮೈತ್ರಿಯಾಗಿ ರೂಪಾಂತರಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವಾಂಗ್ ಹಾಗೂ ಜಪಾನ್ ವಿದೇಶಾಂಗ ಸಚಿವ ತೋಶಿಮಿಟ್ಸು ಮೋಟೆಗಿ ಭಾಗವಹಿಸಿದ್ದರು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಭದ್ರತಾ ಸವಾಲುಗಳು ಮತ್ತು ಚೀನಾದ ವಿಸ್ತರಣಾ ನೀತಿಯ ನಡುವೆಯೇ ಈ ಸಭೆ ವಿಶೇಷ ಮಹತ್ವ ಪಡೆದುಕೊಂಡಿದೆ.
ಸಭೆಯಲ್ಲಿ ಮಾತನಾಡಿದ ಮಾರ್ಕೊ ರುಬಿಯೊ ಅವರು, ಇಂದು ಇಲ್ಲಿ ಸೇರಿರುವ ರಾಷ್ಟ್ರಗಳು ಜಗತ್ತಿನ ಒಟ್ಟು GDPಯ ಸುಮಾರು ಮೂರನೇ ಭಾಗವನ್ನು ಪ್ರತಿನಿಧಿಸುತ್ತವೆ. ಸುಮಾರು 200 ಕೋಟಿ ಜನರ ಪ್ರತಿನಿಧಿಗಳಾದ ಈ ರಾಷ್ಟ್ರಗಳು ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಆರ್ಥಿಕ ಅಭಿವೃದ್ಧಿಯ ಸಾಮಾನ್ಯ ಗುರಿಗಳನ್ನು ಹಂಚಿಕೊಂಡಿವೆ ಎಂದು ಹೇಳಿದರು.
ಸಭೆಯ ಪ್ರಮುಖ ಘೋಷಣೆಗಳಲ್ಲಿ ಇಂಡೋ-ಪೆಸಿಫಿಕ್ ಮೆರಿಟೈಮ್ ಸರ್ವೆಲೆನ್ಸ್ ಕೋ-ಆಪರೇಷನ್ ಇನಿಶಿಯೇಟಿವ್ ಪ್ರಮುಖವಾಗಿದೆ.
ಈ ಯೋಜನೆಯ ಮೂಲಕ ಕ್ವಾಡ್ ರಾಷ್ಟ್ರಗಳು ತಮ್ಮ ಸಾಗರ ನಿಗಾವ್ಯವಸ್ಥೆ ಸಾಮರ್ಥ್ಯಗಳನ್ನು ಪರಸ್ಪರ ಹಂಚಿಕೊಳ್ಳಲಿದ್ದು, ಸಮುದ್ರ ಭದ್ರತೆ ಮತ್ತು ಮಾಹಿತಿ ವಿನಿಮಯವನ್ನು ಮತ್ತಷ್ಟು ಬಲಪಡಿಸಲಾಗುತ್ತದೆ.
ಇದರ ಜೊತೆಗೆ ಇಂಡೋ-ಪೆಸಿಫಿಕ್ ಮೆರಿಟೈಮ್ ಡೊಮೇನ್ ಅವೇರ್‌ನೆಸ್ ಇನಿಶಿಯೇಟಿವ್ ವಿಸ್ತರಣೆಗೂ ಒಪ್ಪಿಗೆ ನೀಡಲಾಗಿದೆ. ಇದರ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದ ರಾಷ್ಟ್ರಗಳಿಗೆ ಸಮುದ್ರ ಚಟುವಟಿಕೆಗಳ ಕುರಿತು ತಕ್ಷಣದ ಮಾಹಿತಿ ಲಭ್ಯವಾಗಲಿದೆ.
ರುಬಿಯೊ ಮತ್ತೊಂದು ಮಹತ್ವದ ಯೋಜನೆಯಾಗಿ ಪೆಸಿಫಿಕ್ ದ್ವೀಪ ರಾಷ್ಟ್ರಗಳ ಬಂದರು ಮೂಲಸೌಕರ್ಯ ಅಭಿವೃದ್ಧಿಗೆ ಸಹಭಾಗಿತ್ವ ಘೋಷಿಸಿದರು.
ಮೊದಲ ಹಂತದಲ್ಲಿ ಫಿಜಿ ದೇಶದ ಬಂದರು ಅಭಿವೃದ್ಧಿಗೆ ಕ್ವಾಡ್ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲಿವೆ. “ಪೆಸಿಫಿಕ್ ದ್ವೀಪಗಳಲ್ಲಿ ಬಂದರು ಸಾಮರ್ಥ್ಯದ ಕೊರತೆ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಫಿಜಿಯ ಬಂದರು ಮೂಲಸೌಕರ್ಯ ಅಭಿವೃದ್ಧಿಗೆ ನಾವು ಕೈಜೋಡಿಸುತ್ತಿದ್ದೇವೆ. ಇದು ಕ್ವಾಡ್ ರಾಷ್ಟ್ರಗಳು ಒಟ್ಟಾಗಿ ಕೈಗೆತ್ತಿಕೊಳ್ಳುತ್ತಿರುವ ಮೊದಲ ಬಂದರು ಯೋಜನೆ ಎಂದು ಹೇಳಿದರು.
ಇದೇ ವೇಳೆ ಸಾಗರ ಭದ್ರತೆಯ ಮಹತ್ವವನ್ನು ಒತ್ತಿಹೇಳಿದ ರುಬಿಯೋ, ಜಾಗತಿಕ ಸಮುದ್ರ ವ್ಯಾಪಾರದ ಸುಮಾರು 60 ಶೇಕಡಾ ಇಂಡೋ-ಪೆಸಿಫಿಕ್ ಪ್ರದೇಶದ ಮೂಲಕ ಸಾಗುತ್ತದೆ. ಆದ್ದರಿಂದ ಈ ಪ್ರದೇಶದ ಭದ್ರತೆ ಕೇವಲ ನಾಲ್ಕು ರಾಷ್ಟ್ರಗಳಿಗಷ್ಟೇ ಅಲ್ಲ, ಜಗತ್ತಿನ ಅನೇಕ ದೇಶಗಳಿಗೂ ಅತ್ಯಂತ ಮುಖ್ಯ ಎಂದು ತಿಳಿಸಿದರು.
ಇದರೊಂದಿಗೆ ಪ್ರಮುಖ ಖನಿಜ ಸಂಪನ್ಮೂಲಗಳ ಸರಬರಾಜು ಸರಪಳಿಯನ್ನು ಬಲಪಡಿಸಲು “ಕ್ವಾಡ್ ಕ್ರಿಟಿಕಲ್ ಮಿನರಲ್ಸ್ ಫ್ರೇಮ್‌ವರ್ಕ್” ಅನ್ನು ಘೋಷಿಸಲಾಯಿತು.
ಗಣಿಗಾರಿಕೆ, ಸಂಸ್ಕರಣೆ ಹಾಗೂ ಮರುಬಳಕೆ ಕ್ಷೇತ್ರಗಳಲ್ಲಿ ಹೂಡಿಕೆ ಮತ್ತು ಸಹಕಾರವನ್ನು ಹೆಚ್ಚಿಸುವ ಮೂಲಕ ಪ್ರಮುಖ ಖನಿಜ ಸಂಪನ್ಮೂಲಗಳ ಪೂರೈಕೆಯನ್ನು ಸುರಕ್ಷಿತಗೊಳಿಸುವ ಈ ಯೋಜನೆಯ ಉದ್ದೇಶವಾಗಿದೆ
ರುಬಿಯೊ ತಮ್ಮ ಭಾಷಣದಲ್ಲಿ, ತಾವು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಕ್ವಾಡ್ ಸಭೆ ಇದಾಗಿತ್ತು ಎಂದು ನೆನಪಿಸಿಕೊಂಡರು.
ಇದು ಕ್ವಾಡ್ ಬಗ್ಗೆ ಅಮೆರಿಕದ ಬದ್ಧತೆಯನ್ನು ತೋರಿಸುತ್ತದೆ. ಕಳೆದ ಒಂದು ವರ್ಷದಲ್ಲಿ ಕೇವಲ ಸಮಸ್ಯೆಗಳ ಬಗ್ಗೆ ಮಾತನಾಡುವ ವೇದಿಕೆಯಿಂದ ಹೊರಬಂದು, ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕಾರ್ಯೋನ್ಮುಖ ಮೈತ್ರಿಯಾಗಿ ಕ್ವಾಡ್ ಬೆಳೆಯುತ್ತಿದೆ ಎಂದು ಹೇಳಿದರು.
ಇತ್ತೀಚಿನ ಜಾಗತಿಕ ಬೆಳವಣಿಗೆಗಳು ಕ್ವಾಡ್ ಸಹಕಾರದ ಅಗತ್ಯವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಹೇಳಿದ ಅವರು, ಇಂಧನ ಭದ್ರತೆ, ಸರಕು ಸರಪಳಿ, ಸಾಗರ ಸ್ವಾತಂತ್ರ್ಯ ಮತ್ತು ಮಾನವೀಯ ನೆರವು ಕ್ಷೇತ್ರಗಳಲ್ಲಿ ಕ್ವಾಡ್ ಮಹತ್ವದ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾರ್ಕೊ ರುಬಿಯೊ ನಾಲ್ಕು ದಿನಗಳ ಅಧಿಕೃತ ಭಾರತ ಪ್ರವಾಸದಲ್ಲಿದ್ದು, ಸಭೆಯಲ್ಲಿ ಭಾಗವಹಿಸಲು ಮಂಗಳವಾರ ದೆಹಲಿಗೆ ಆಗಮಿಸಿದ್ದರು. ಅದಕ್ಕೂ ಮೊದಲು ಅವರು ತಮ್ಮ ಪತ್ನಿ ಜೆನೆಟ್ ರುಬಿಯೊ ಹಾಗೂ ಭಾರತದಲ್ಲಿನ ಅಮೆರಿಕ ರಾಯಭಾರಿ ಸರ್ಜಿಯೋ ಗಾರ್ ಜೊತೆ ಜೈಪುರದ ಐತಿಹಾಸಿಕ ಆಮೇರ್ ಕೋಟೆಗೆ ಭೇಟಿ ನೀಡಿದ್ದರು.