ಚೀತಾ ಬೇಟೆಗಾರರು ಸಿಕ್ಕಿ ಬಿದ್ದಿದ್ದೇ ರೋಚಕ 
ದೇಶ

ಗುಂಡು ಪತ್ತೆ, ಪ್ರಾಚೀನ ಬಂದೂಕು: ಚೀತಾ ಬೇಟೆಗಾರರು ಸಿಕ್ಕಿ ಬಿದ್ದಿದ್ದೇ ರೋಚಕ, STF ಹೇಳಿದ್ದೇನು?

ಚೀತಾ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಹಳೆಯ ಕಾಲದ ಎರಡು ನಳಿಕೆಗಳ ಬಂದೂಕನ್ನೂ ವಶಪಡಿಸಿಕೊಂಡಿದೆ. ಬೇಟೆಯ ವೇಳೆ ಚೀತಾ ಕೇವಲ 12ರಿಂದ 15 ಅಡಿ ದೂರದಲ್ಲಿದ್ದಾಗ ಆರೋಪಿಗಳಲ್ಲೊಬ್ಬ ಗುಂಡು ಹಾರಿಸಿದ್ದಾನೆ..

ಭೋಪಾಲ್: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ್ದ 19 ತಿಂಗಳ ಗಂಡು ಚೀತಾ ಮೃತಪಟ್ಟ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಹೋದರರನ್ನು ಮಧ್ಯಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಬಂಧಿಸಿದ್ದು ಬೇಟೆಗಾರರ ಬಂಧನವೇ ರೋಚಕವಾಗಿತ್ತು ಎನ್ನಲಾಗಿದೆ.

ಬಂಧಿತರನ್ನು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಪಹಾರ್‌ಗಢ್ ತಾಲ್ಲೂಕಿನ ನವಲ್‌ಪುರ-ಬೆಹರಾರಾ ಗ್ರಾಮದ ಭಗವಾನ್ ಸಿಂಗ್ ಮತ್ತು ಆತನ ಸಹೋದರ ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ.

ಅಲ್ಲದೆ, ಚೀತಾ ಹತ್ಯೆಗೆ ಬಳಸಲಾಗಿದೆ ಎನ್ನಲಾದ ಹಳೆಯ ಕಾಲದ ಎರಡು ನಳಿಕೆಗಳ ಬಂದೂಕನ್ನೂ ವಶಪಡಿಸಿಕೊಂಡಿದೆ. ಬೇಟೆಯ ವೇಳೆ ಚೀತಾ ಕೇವಲ 12ರಿಂದ 15 ಅಡಿ ದೂರದಲ್ಲಿದ್ದಾಗ ಆರೋಪಿಗಳಲ್ಲೊಬ್ಬ ಗುಂಡು ಹಾರಿಸಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ರಾಜ್ಯ ಪೊಲೀಸ್ ವಿಶೇಷ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆಯ ವಿಶೇಷ ಹುಲಿ ದಾಳಿ ತಡೆ ಪಡೆ (ಎಸ್‌ಟಿಎಸ್‌ಎಫ್) ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿವೆ. ಬಂಧಿತರು ಅಲೆಮಾರಿ ಮಂಗಿಯಾ ಸಮುದಾಯಕ್ಕೆ ಸೇರಿದವರು ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 24ರಂದು ಶಿಯೋಪುರ ಜಿಲ್ಲೆಯ ವಿಜಯಪುರ ಪ್ರದೇಶದ ನಿತನ್‌ವಾಸ್ ಗ್ರಾಮದ ಸಮೀಪ ಇಬ್ಬರೂ ಬೇಟೆಗೆ ತೆರಳಿದ್ದರು. ಕಾಡುಹಂದಿಯನ್ನು ಬೇಟೆಯಾಡಲು ಕಾಯುತ್ತಿದ್ದಾಗ ಇದ್ದಕ್ಕಿದ್ದಂತೆ 12ರಿಂದ 15 ಅಡಿ ದೂರದಲ್ಲಿ ಚೀತಾ ಕಾಣಿಸಿಕೊಂಡಿದೆ ಎಂದು ವಿಚಾರಣೆ ವೇಳೆ ಭಗವಾನ್ ಸಿಂಗ್ ಹೇಳಿದ್ದಾನೆ ಎನ್ನಲಾಗಿದೆ.

ಬೇಟೆಗಾರರ ಸುಳಿವು ಕೊಟ್ಟ ಪ್ರಚೀನ ಬಂದೂಕಿನ ಗುಂಡುಗಳು

ಇನ್ನು ಅಕ್ಟೋಬರ್ 24ರಂದು ಗುಂಡಿನ ದಾಳಿಗೆ ಒಳಗಾಗಿದ್ದ ಚೀತಾವನ್ನು ಮರುದಿನ ಅಕ್ಟೋಬರ್ 25ರಂದು ಶಿಯೋಪುರ ಅರಣ್ಯ ವಿಭಾಗದ 748ನೇ ಕಂಪಾರ್ಟ್‌ಮೆಂಟ್‌ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ರಕ್ಷಿಸಲಾಗಿತ್ತು.

19 ತಿಂಗಳ ಗಂಡು ಚೀತಾಗೆ ಜಬಲ್ಪುರದ ನಾನಾಜಿ ದೇಶಮುಖ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಪಶುವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ರೇಡಿಯಾಲಜಿ ವಿಭಾಗದ ತಂಡ ಚಿಕಿತ್ಸೆ ನೀಡಿತ್ತು. ಸಿಟಿ ಸ್ಕ್ಯಾನ್ ಹಾಗೂ ವೈದ್ಯಕೀಯ ತಪಾಸಣೆ ವೇಳೆ ಅದರ ದೇಹದೊಳಗೆ ಐದು ಸೀಸದ ಗುಂಡುಗಳು ಸಿಲುಕಿರುವುದು ಪತ್ತೆಯಾಗಿತ್ತು.

ವೈದ್ಯರು ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಿದರೂ ಚೀತಾವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಕ್ಟೋಬರ್ 27ರಂದು ಅದು ಮೃತಪಟ್ಟಿತು. ಬಳಿಕ ಅದರ ಮೃತದೇಹವನ್ನು ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು. ಕೆಎನ್‌ಜಿ-22, ನಿರ್ವಾ ಎಂಬ ಹೆಣ್ಣು ಚೀತಾದ ಮರಿಗಳಲ್ಲಿ ಒಂದಾಗಿತ್ತು. ಚೀತಾಗಳ ಮರುಪರಿಚಯ ಯೋಜನೆಯ ಭಾಗವಾಗಿ ಭಾರತದಲ್ಲೇ ಜನಿಸಿತ್ತು.

ಸಂಘಟಿತ ವನ್ಯಜೀವಿ ಕಳ್ಳಸಾಗಣೆ ಜಾಲದ ಸಂಪರ್ಕವಿಲ್ಲ

ಇದುವರೆಗಿನ ತನಿಖೆಯಲ್ಲಿ ಚೀತಾ ಹತ್ಯೆಗೂ ವನ್ಯಜೀವಿಗಳ ಅಕ್ರಮ ವ್ಯಾಪಾರ ಅಥವಾ ಸಂಘಟಿತ ವನ್ಯಜೀವಿ ಅಪರಾಧ ಜಾಲಕ್ಕೂ ಯಾವುದೇ ಸಂಬಂಧ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಸಹೋದರರು ಬೇಟೆಗೆ ತೆರಳಿದ್ದ ಸಂದರ್ಭದಲ್ಲಿ ಭಗವಾನ್ ಸಿಂಗ್ ಚೀತಾವನ್ನು ಚಿರತೆ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳು ಈ ಹಿಂದೆ ಬೇರೆ ಯಾವುದೇ ಬೇಟೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51ರ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಸಂರಕ್ಷಿತ ವನ್ಯಜೀವಿ ಬೇಟೆ ನಿಷೇಧಿಸಿದರೆ, ಸೆಕ್ಷನ್ 51 ಕಾಯ್ದೆಯ ನಿಯಮ ಉಲ್ಲಂಘಿಸುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುತ್ತದೆ. ನವೆಂಬರ್ 2ರಂದು ಇಬ್ಬರು ಆರೋಪಿಗಳನ್ನು ಶಿಯೋಪುರ ಜಿಲ್ಲೆಯ ವಿಜಯಪುರ ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿತ್ತು. ಮುಂದಿನ ಕಾನೂನು ಪ್ರಕ್ರಿಯೆಗಳು ಮುಂದುವರಿಯಲಿವೆ.

ಕುನೋ ಸುತ್ತಮುತ್ತ ಬೇಟೆಗಾರರ ಕಾಟದ ಆತಂಕ, ಕಟ್ಟೆಚ್ಚರ

ಕುನೋ ರಾಷ್ಟ್ರೀಯ ಉದ್ಯಾನದಿಂದ ಹೊರಬಂದು ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಸಂಚರಿಸುವ ಚೀತಾಗಳ ಸುರಕ್ಷತೆ ಕುರಿತು ಈ ಘಟನೆ ಮತ್ತೆ ಆತಂಕ ಮೂಡಿಸಿದೆ. ಪ್ರಾಜೆಕ್ಟ್ ಚೀತಾದ ಆರಂಭಿಕ ಕಾರ್ಯಯೋಜನೆಯಲ್ಲೇ ಕುನೋ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಮಾಂಸ ಸೇವನೆ ವ್ಯಾಪಕವಾಗಿರುವುದನ್ನು ಉಲ್ಲೇಖಿಸಲಾಗಿತ್ತು. ಹಲವು ಗ್ರಾಮಗಳ ನಿವಾಸಿಗಳ ಬಳಿ ಸ್ಥಳೀಯವಾಗಿ ತಯಾರಿಸಿದ ಬಂದೂಕುಗಳು, ಬಿಲ್ಲು, ಬಾಣ ಸೇರಿದಂತೆ ಬೇಟೆಯಾಡಲು ಬಳಸುವ ಉಪಕರಣಗಳಿವೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು.

ಹೀಗಾಗಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಬೇಟೆ ತಡೆಗಟ್ಟಲು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ನಡುವೆ ಸಮನ್ವಯ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿತ್ತು. ಮಾಂಸಕ್ಕೆ ಪರ್ಯಾಯವಾಗಿ ಕೋಳಿ ಸಾಕಾಣಿಕೆಯನ್ನು ಉತ್ತೇಜಿಸುವಂತೆ ಪಶುಸಂಗೋಪನಾ ಇಲಾಖೆಯ ಸಹಕಾರ ಪಡೆಯುವ ಸಲಹೆಯನ್ನೂ ನೀಡಲಾಗಿತ್ತು. ಕುನೋ ಸುತ್ತಮುತ್ತ ಬೇಟೆ ಮತ್ತು ವನ್ಯಜೀವಿಗಳ ಹತ್ಯೆ ಹೊಸದೇನಲ್ಲ. 2022ರ ಏಪ್ರಿಲ್‌ನಲ್ಲಿ, ನಮೀಬಿಯಾದಿಂದ ಮೊದಲ ಚೀತಾಗಳು ಭಾರತಕ್ಕೆ ಬರುವ ಕೆಲವೇ ತಿಂಗಳುಗಳ ಮೊದಲು ಉದ್ಯಾನದ ಬಫರ್ ವಲಯದಲ್ಲಿ ಬೇಟೆಗಾರರು ಚಿರತೆಯೊಂದನ್ನು ಕೊಂದಿದ್ದರು.

ನದಿ ಬಳಿ ಅಡಗಿಸಿಟ್ಟದ್ದ ಬಂದೂಕು ವಶಕ್ಕೆ

2023ರ ಆಗಸ್ಟ್‌ನಲ್ಲಿ ಉದ್ಯಾನದ ಪ್ರವೇಶದ್ವಾರದ ಸಮೀಪ ನದಿಯೊಂದರ ಬಳಿ ಅಡಗಿಸಿಟ್ಟಿದ್ದ ರೈಫಲ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡು, ಮೂವರು ಶಂಕಿತ ಬೇಟೆಗಾರರನ್ನು ಬಂಧಿಸಿದ್ದರು. 2024ರಲ್ಲಿ ಮೊರಾವನ್ ಪಶ್ಚಿಮ ವಲಯಕ್ಕೆ ಚೀತಾಗಳಾದ ಆಗ್ನಿ ಮತ್ತು ವಾಯು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ನುಗ್ಗಲು ಯತ್ನಿಸಿದ್ದ ಶಂಕಿತ ಬೇಟೆಗಾರರನ್ನು ಗಸ್ತು ತಂಡ ತಡೆದಿತ್ತು. ಈ ವೇಳೆ ಬೇಟೆಗಾರರು ಗುಂಡು ಹಾರಿಸಿ ಪರಾರಿಯಾಗಿದ್ದರು ಎನ್ನಲಾಗಿದೆ.

ಜಿಂಕೆಗಳ ಬೇಟೆಯೂ ಈ ಪ್ರದೇಶದಲ್ಲಿ ನಿರಂತರ ಸಮಸ್ಯೆಯಾಗಿದೆ. ಬೇಟೆಗಾರರು ತಮ್ಮ ಚಟುವಟಿಕೆಗಳು ಕ್ಯಾಮೆರಾದಲ್ಲಿ ಸೆರೆಯಾಗದಂತೆ ಅರಣ್ಯದಲ್ಲಿ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಕಳವು ಮಾಡುತ್ತಿದ್ದಾರೆ ಎಂಬ ಶಂಕೆಯನ್ನೂ ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

ಚಿರತೆ ಎಂದು ಭಾವಿಸಿ ಚೀತಾಗಳ ಬೇಟೆ; ಇಬ್ಬರು ಬೇಟೆಗಾರ ಸಹೋದರರ ಬಂಧನ, ಡಬಲ್ ಬ್ಯಾರೆಲ್ ಗನ್ ವಶಕ್ಕೆ!

ಕಾಂಗ್ರೆಸ್ ಆಕ್ರೋಶಕ್ಕೆ ಮಣಿದ ವಿಜಯೇಂದ್ರ: ಪೋಸ್ಟರ್ ಸಮರ ಬೆನ್ನಲ್ಲೇ 'ಈ ನನ್ನ ಮಕ್ಕಳು' ಹೇಳಿಕೆಗೆ ಕ್ಷಮೆಯಾಚಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಮಹಿಳೆಗೆ ಚಾಕು ತೋರಿಸಿ, ಒತ್ತೆಯಾಳಾಗಿಸಿಕೊಂಡು ದರೋಡೆಗೆ ಯತ್ನ; ಮಂಗಳಸೂತ್ರ ಕಿತ್ತುಕೊಂಡ ದುಷ್ಕರ್ಮಿಗೆ 'ಧರ್ಮದೇಟು'! Video

RTGS ಚೋರ್ ಬಿವೈ ವಿಜಯೇಂದ್ರ: ಈ ನನ್ ಮಕ್ಕಳು ಎಂದಿದ್ದಕ್ಕೆ BYV ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟರ್ ಸಮರ