ನವದೆಹಲಿ: ಹಳೆಯ ದೆಹಲಿಯ ಚಾವರಿ ಬಜಾರ್‌ನಲ್ಲಿ ಗುರುವಾರ ಬೆಳಿಗ್ಗೆ ಭೀಕರ ದುರಂತವೊಂದು ಸಂಭವಿಸಿದ್ದು, ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡವೊಂದು ಹಠಾತ್ ಕುಸಿದುಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, 15 ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯಲ್ಲಿ ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾವರಿ ಬಜಾರ್ ಮೆಟ್ರೋ ನಿಲ್ದಾಣದ ಸಮೀಪದ ಗಲಿ ಸಿತಾರಾದಲ್ಲಿ ಬೆಳಗ್ಗೆ ಸುಮಾರು 9.50ಕ್ಕೆ ಈ ಘಟನೆ ಸಂಭವಿಸಿದೆ.
ಕನಿಷ್ಠ 15 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದೆ. ಹಲವರು ಗಾಯಗೊಂಡಿದ್ದಾರೆ. ಬೆಳಗ್ಗೆ 9.50ಕ್ಕೆ ನಮಗೆ ಕರೆ ಬಂದಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಎಂಸಿ, ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ದಳ ಹಾಗೂ ಎಂಸಿಡಿ ತಂಡಗಳು ಭಾಗಿಯಾಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಆರು ಅಗ್ನಿಶಾಮಕ ವಾಹನಗಳು ಸೇರಿದಂತೆ ನೀರು ಪೂರೈಸುವ ವಾಹನಗಳು ಹಾಗೂ ರಕ್ಷಣಾ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಹಿರಿಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ದೆಹಲಿ ಅಗ್ನಿಶಾಮಕ ದಳ, ದೆಹಲಿ ಪೊಲೀಸರು, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಚಾವರಿ ಬಜಾರ್‌ನಲ್ಲಿ ನಡೆದ ಈ ಘಟನೆಗೆ ಸುಮಾರು ಎರಡು ತಿಂಗಳ ಹಿಂದೆ ದಕ್ಷಿಣ ಪಶ್ಚಿಮ ದೆಹಲಿಯ ಸತ್ಯ ನಿಕೇತನದಲ್ಲಿ ಸಂಭವಿಸಿದ್ದ ಕಟ್ಟಡ ಕುಸಿತದ ಘಟನೆ ನೆನಪಿಸುತ್ತಿದೆ.
ಸೆಪ್ಟೆಂಬರ್ 6ರಂದು ಬಾಲಕರ ಪೇಯಿಂಗ್ ಗೆಸ್ಟ್ ವಸತಿ ನಿಲಯವಾಗಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಮೃತಪಟ್ಟಿದ್ದರು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು.
ದುರಸ್ತಿ ಕಾಮಗಾರಿ ನಡೆಯುತ್ತಿದ್ದ ವೇಳೆ ಆ ಕಟ್ಟಡ ಕುಸಿದು ಬಿದ್ದಿತ್ತು. ಬಳಿಕ ಹಲವು ಇಲಾಖೆಗಳು ಜಂಟಿಯಾಗಿ ಬೃಹತ್ ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. ಈ ಘಟನೆಯ ನಂತರ ದೆಹಲಿ ಸರ್ಕಾರ ಕಟ್ಟಡಗಳ ರಚನಾತ್ಮಕ ಸುರಕ್ಷತಾ ಪರಿಶೀಲನೆ ನಡೆಸಲು ಹಾಗೂ ರಾಜಧಾನಿಯಾದ್ಯಂತ ಅನಧಿಕೃತ ಮತ್ತು ಅಪಾಯಕಾರಿ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿತ್ತು.