ನವದೆಹಲಿ: ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ ಪಾಲಿಸಬೇಕಾದ ಏಳು ಪ್ರಮುಖ ಷರತ್ತುಗಳ ಪಟ್ಟಿಯೊಂದನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ನೀಡಿದ್ದು, ಈ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್ ಗಾಂಧಿ ತಮ್ಮ ಸಲಹೆಗಳನ್ನು ಅನುಸರಿಸಿದರೆ ಕಾಂಗ್ರೆಸ್‌ನ ಚುನಾವಣಾ ಸಾಧನೆ ಸುಧಾರಿಸಬಹುದು ಎಂದು ಹೇಳಿದ್ದಾರೆ.
ಪದೇಪದೆ ವಿದೇಶ ಪ್ರವಾಸ ಮಾಡುವುದನ್ನು ಕಡಿಮೆ ಮಾಡಬೇಕು, ಹಿರಿಯ ನಾಯಕರನ್ನು ಗೌರವಿಸಬೇಕು ಹಾಗೂ ಅವರ ಅನುಭವದಿಂದ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ಅಲ್ಲದೆ, 'ಭಾರತ ವಿರೋಧಿ ವ್ಯಕ್ತಿಗಳ' ಕಾರ್ಯಸೂಚಿಯನ್ನು ಉತ್ತೇಜಿಸುವುದನ್ನು ನಿಲ್ಲಿಸಬೇಕು, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ 'ಆಳವಾದ ದ್ವೇಷ'ವನ್ನು ಕೈಬಿಡಬೇಕು ಹಾಗೂ ಬಿಜೆಪಿಯನ್ನು ರಾಜಕೀಯ ಎದುರಾಳಿಯಾಗಿ ನೋಡಬೇಕೇ ಹೊರತು ಶತ್ರುವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಸಂಸತ್ತಿನ ಕಲಾಪವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕಾಂಗ್ರೆಸ್ ಸಂಸದರಿಗೆ ಚರ್ಚೆ ಹಾಗೂ ಸಂವಾದಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂಬುದು ರಿಜಿಜು ಅವರ ಮತ್ತೊಂದು ಸಲಹೆಯಾಗಿದೆ.
ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಗೌರವಿಸಬೇಕು, ಕಾಂಗ್ರೆಸ್ ಪಕ್ಷವು ಪ್ರಜಾಪ್ರಭುತ್ವದ ತತ್ವಗಳಡಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಹಾಗೂ 'ವಂಶಾಡಳಿತ ರಾಜಕಾರಣವನ್ನು ಬುಡಮೇಲು ಮಾಡಬೇಕು' ಎಂದೂ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಅವಕಾಶ ನೀಡಬೇಕೆಂದು ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷ ನಾಯಕರು ಒತ್ತಾಯಿಸುತ್ತಿರುವುದನ್ನು ರಿಜಿಜು ಪದೇಪದೆ ಟೀಕಿಸುತ್ತಿದ್ದಾರೆ.
ಬುಧವಾರವೂ ಸಂಸತ್ತಿನಲ್ಲಿ ತಾವು ಮಾಡಿದ ಭಾಷಣದ ವಿಡಿಯೊವನ್ನು ಹಂಚಿಕೊಂಡಿರುವ ಅವರು, ಸದನದಿಂದ ಹೊರನಡೆದ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಸತ್ತು ಚರ್ಚೆ ಮತ್ತು ಸಂವಾದಕ್ಕಾಗಿ ಇರುವ ವೇದಿಕೆ. ಆದರೆ ಪ್ರಜಾಪ್ರಭುತ್ವ, ಚರ್ಚೆ ಮತ್ತು ಸಂವಾದದಲ್ಲಿ ನಂಬಿಕೆ ಇಲ್ಲದವರೇ ಚರ್ಚೆಗೆ ಆಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ಬಹಿರಂಗ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಸವಾಲು ಹಾಕಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ವಾಕ್ಸಮರ ತೀವ್ರಗೊಂಡಿದೆ.
ಬುಧವಾರವೂ ತಮ್ಮ ಸವಾಲನ್ನು ಪುನರುಚ್ಚರಿಸಿದ ರಾಹುಲ್ ಗಾಂಧಿ, ಮೋದಿ ಅವರನ್ನು 'ದೇಶದ್ರೋಹಿ' ಎಂದು ಸಾಬೀತುಪಡಿಸಲು ತಮಗೆ ಐದು ನಿಮಿಷ ಸಾಕು ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೇ ವೇಳೆ, 'ಮತಗಳ್ಳತನ'ದ ಆರೋಪಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದರು.
ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಿಜಿಜು, 'ದಿಮಾಗಿ ನಕ್ಸಲ್' ಎಂಬ ಪದವು ರಾಜಕೀಯ ನಿರೂಪಣೆಯಲ್ಲ ಎಂದು ಹೇಳಿದ್ದಾರೆ.
ಮಾವೋವಾದಿ ಕಾರ್ಯಸೂಚಿಯನ್ನು ಬೆಂಬಲಿಸುವವರು, ಸಂವಿಧಾನವನ್ನು ತಿರಸ್ಕರಿಸುವವರು, ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವವರು ಹಾಗೂ ಭಾರತದ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವವರನ್ನು ಉದ್ದೇಶಿಸಿ ಈ ಪದ ಬಳಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರವೂ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದರು. ಪ್ರತಿಪಕ್ಷಗಳು ದೇಶವಿರೋಧಿ ಎಂಬ ಪ್ರಧಾನಿ ಆರೋಪದ ಕುರಿತು ಚರ್ಚೆಗೆ ಸಿದ್ಧರಾಗುವಂತೆ ಆಗ್ರಹಿಸಿದ್ದರು. ವಿದೇಶಿ ಸಂಪರ್ಕಗಳಿವೆ ಎಂಬ ತಮ್ಮ ಆರೋಪದ ಬಗ್ಗೆ ಮೋದಿ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಏಕೆ ದಾಖಲಿಸಿಲ್ಲ ಎಂದೂ ಪ್ರಶ್ನಿಸಿದ್ದರು.
ವಿದೇಶಿ ನೆರವಿನಿಂದಲೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ ಎಂದು ಮೋದಿ ವಿರುದ್ಧ ಆರೋಪಿಸಿದ್ದ ರಾಹುಲ್ ಗಾಂಧಿ, ಈ ವಿಚಾರವಾಗಿ ಸಾರ್ವಜನಿಕ ಚರ್ಚೆ ನಡೆಸಬೇಕೆಂಬ ತಮ್ಮ ಒತ್ತಾಯವನ್ನು ಪುನರುಚ್ಚರಿಸಿದ್ದರು.