ನವದೆಹಲಿ: ರಷ್ಯಾ ಮೂಲದ ಭಾರತೀಯ ವಾಯುಪಡೆಯ ಸಾರಿಗೆ ವಿಮಾನ ಲಡಾಖ್‌ನ ನಿಯೋಮಾ ವಾಯುನೆಲೆಯಲ್ಲಿ ಇಂದು ಶನಿವಾರ ಯಶಸ್ವಿಯಾಗಿ ಇಳಿಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಜಗತ್ತಿನಲ್ಲೇ, ಅತಿ ಎತ್ತರದ ಪ್ರದೇಶದಲ್ಲಿ ಇಳಿದ ಸಾಧನೆ ಈ ವಿಮಾನದ್ದಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ.
ಸಮುದ್ರ ಮಟ್ಟದಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ಈ ವಾಯುನೆಲೆಯು ಚೀನಾದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆಯಿಂದ (LAC) ಸುಮಾರು 25 ಕಿ.ಮೀ. ದೂರದಲ್ಲಿದೆ.
ಭಾರತೀಯ ವಾಯುಪಡೆಯ ಐಎಲ್-76ಎಂಡಿ ವಿಮಾನವು ನಿಯೋಮಾದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದೆ. ಜಗತ್ತಿನಲ್ಲೇ ಈ ವಿಮಾನವು ಅತಿ ಎತ್ತರದ ಪ್ರದೇಶದಲ್ಲಿ ಇಳಿದ ಸಾಧನೆ ಇದಾಗಿದೆ ಎಂದು ಭಾರತೀಯ ವಾಯುಪಡೆ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.
ವಿಮಾನದ ದೀರ್ಘಕಾಲೀನ ಕಾರ್ಯಕ್ಷಮತೆ, ಅದರ ಸಿಬ್ಬಂದಿಯ ಅಸಾಧಾರಣ ಕೌಶಲ, ನಿಖರತೆ ಮತ್ತು ವೃತ್ತಿಪರತೆಯನ್ನು ಈ ಸಾಧನೆ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಹೇಳಿದೆ.
ಈ ಸಾಧನೆಯು ಭಾರತದ ಕಾರ್ಯತಂತ್ರದ ವಾಯುಸಾಗಣೆ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಮೈಲಿಗಲ್ಲಾಗಿದೆ ಎಂದು ವಾಯುಪಡೆ ಬಣ್ಣಿಸಿದೆ.