ಅಯೋಧ್ಯೆ: ತಮ್ಮ ತಂಗಿ ಟೀ ಅಂಗಡಿ ನಡೆಸುತ್ತಿರುವ ಕುರಿತು ಎದ್ದಿರುವ ಚರ್ಚೆಗೆ ತೆರೆ ಎಳೆದಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅದರಲ್ಲಿ ತಪ್ಪೇನು..? ಆಕೆ ತನ್ನ ಕಾಲ ಮೇಲೆ ನಿಂತಿದ್ದಾಳೆ ಎಂದು ಹೇಳಿದ್ದಾರೆ.
ಯೋಗಿ ಆದಿತ್ಯಾನಾಥ್ ಅವರ ಪೂರ್ವಾಶ್ರಮದ ತಂಗಿ ಟೀ ಮಾರುತ್ತಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ತಮ್ಮ ತಂಗಿ ಯಾರ ಮುಂದೆಯೂ ಕೈಚಾಚದೆ ಸ್ವಂತ ದುಡಿಮೆಯಿಂದ ಬದುಕುತ್ತಿರುವುದು ಗೌರವದ ಬದುಕು ಎಂದು ಹೇಳಿದ್ದಾರೆ.
ಭಾನುವಾರ ಅಯೋಧ್ಯೆಯಲ್ಲಿ ನಡೆದ 'ಆಜ್‌ತಕ್ ಪಂಚಾಯತ್' ಕಾರ್ಯಕ್ರಮದಲ್ಲಿ ಹಿರಿಯ ಸಂಪಾದಕಿ ಶ್ವೇತಾ ಸಿಂಗ್ ಅವರು ಯೋಗಿ ಆದಿತ್ಯನಾಥ್ ಅವರ ಕುಟುಂಬದ ಹಿನ್ನೆಲೆ ಹಾಗೂ ಅವರ ತಂಗಿಯ ಟೀ ಅಂಗಡಿಯ ವಿಡಿಯೋ ಕುರಿತು ಪ್ರಶ್ನಿಸಿದರು.
ತಂಗಿ ನಡೆಸುತ್ತಿರುವ ಚಹಾ ಅಂಗಡಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವರ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿರುವಂತೆ ಕಾಣುತ್ತಿದೆ. ನಿಮ್ಮ ಅಭಿಮಾನಿಗಳು ಮತ್ತು ವಿರೋಧಿಗಳು ಈ ವಿಚಾರವನ್ನು ಹೇಗೆ ನೋಡುತ್ತಾರೆ? ನಿಮ್ಮ ತಂಗಿಯ ಪರಿಸ್ಥಿತಿಯನ್ನು ಸುಧಾರಿಸಲು ನಿಮಗೆ ಸಾಧ್ಯವಾಗಿಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಯೋಗಿ ಆದಿತ್ಯನಾಥ್, ತಾನು ಒಬ್ಬ ಯೋಗಿಯಾಗಿದ್ದು, ಸಾಮಾನ್ಯ ಅರ್ಥದಲ್ಲಿ ಕುಟುಂಬದ ಬಗ್ಗೆ ಯೋಚಿಸುವುದಿಲ್ಲ ಎಂದರು.
'ನನಗೆ ಉತ್ತರ ಪ್ರದೇಶದ 25 ಕೋಟಿ ಜನರೇ ಕುಟುಂಬ'
ಇದೇ ವೇಳೆ 'ನಾನು ಒಬ್ಬ ಯೋಗಿ. ನನಗೆ ಉತ್ತರ ಪ್ರದೇಶದ 25 ಕೋಟಿ ಜನರೇ ಕುಟುಂಬ' ಎಂದು ಹೇಳಿದರು.
ತಮ್ಮ ತಂಗಿಯ ಬಗ್ಗೆ ಮಾತನಾಡಿದ ಅವರು, ಆಕೆ ಯಾರ ಮೇಲೂ ಆರ್ಥಿಕವಾಗಿ ಅವಲಂಬಿತವಾಗಿಲ್ಲ. ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಯಾರ ಮುಂದೆಯೂ ಕೈಚಾಚದೆ ಸ್ವಂತ ಕಾಲ ಮೇಲೆ ನಿಂತಿರುವುದು ಗೌರವದ ಬದುಕು ಎಂದು ಅಭಿಪ್ರಾಯಪಟ್ಟರು.
'ನನ್ನ ತಂಗಿ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ. ಸ್ವಂತ ಕಾಲ ಮೇಲೆ ನಿಂತು ಆರ್ಥಿಕವಾಗಿ ಸ್ವಾವಲಂಬಿಯಾಗುವ ದಾರಿಯಲ್ಲಿ ಸಾಗುತ್ತಿದ್ದಾಳೆ. ನನ್ನ ಪ್ರಕಾರ ಇದೇ ಅತ್ಯಂತ ಗೌರವಯುತ ಜೀವನ' ಎಂದು ಯೋಗಿ ಹೇಳಿದರು.
ಇದೇ ವೇಳೆ, ಯಾರ ಮುಂದೆಯೂ ಕೈಚಾಚುವ ಬದಲು ಸ್ವಂತ ದುಡಿಮೆಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬ ಗೌರವಯುತ ವ್ಯಕ್ತಿಯೂ ಸ್ವಾವಲಂಬನೆಯ ಹಾದಿಯಲ್ಲಿ ಸಾಗಬೇಕು ಎಂದು ಅವರು ಸಲಹೆ ನೀಡಿದರು.