ಶಿವಾಂಗಿ ಸಿಂಗ್ - ಅನಂತ್ ಸಿಂಗ್ 
ದೇಶ

ಬಿಹಾರದ 'ಬಾಹುಬಲಿ'ಯ ಮಗಳ ಮದುವೆಗೆ ಭರ್ಜರಿ ಸಿದ್ಧತೆ; ಪ್ರಧಾನಿ ಮೋದಿ ಸೇರಿ ಅತಿಥಿಗಳ ಸಂಖ್ಯೆ 4 ಲಕ್ಷ ದಾಟಬಹುದು!

ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕೇವಲ ಬಿಹಾರದಿಂದಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದಾದ್ಯಂತ ಇರುವವರಿಗೆ ಆಹ್ವಾನ ಕಳುಹಿಸಲಾಗಿದೆ... ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳಿಗೂ ಆಹ್ವಾನ ನೀಡಲಾಗಿದೆ.

ಪಾಟ್ನಾ: ಇತ್ತೀಚೆಗೆ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿ(ಯು) ವರಿಷ್ಠ ನಿತೀಶ್ ಕುಮಾರ್ ಅವರಿಗಾಗಿ ತಾನು 'ಒಂಬತ್ತು ಜನರನ್ನು ಹತ್ಯೆ' ಮಾಡಿಸಿದ್ದಾಗಿ ಹೇಳಿ, ಬಳಿಕ ತಮ್ಮ ಹೇಳಿಕೆ ಹಿಂಪಡೆದಿದ್ದ ಬಿಹಾರದ ಪ್ರಭಾವಿ ನಾಯಕ, ಮೊಕಾಮಾ ಜೆಡಿಯು ಬಂಡಾಯ ಶಾಸಕ ಅನಂತ್ ಸಿಂಗ್ ಅವರು ಈಗ ಮಗಳ ಮದುವೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.

ಅನಂತ್ ಸಿಂಗ್ ಅವರು, ನವೆಂಬರ್ 25 ರಂದು ತಮ್ಮ ಮಗಳ ಮದುವೆಯ ಅಂಗವಾಗಿ ಬೃಹತ್ ಔತಣಕೂಟವೊಂದನ್ನು ಏರ್ಪಡಿಸುತ್ತಿದ್ದು, "ಎಲ್ಲರಿಗೂ ಆಹ್ವಾನವಿದೆ" ಎಂದು ಹೇಳಿದ್ದಾರೆ.

ಅನಂತ್ ಸಿಂಗ್ ಅವರ ಮಗಳಾದ ಶಿವಾಂಗಿ ಸಿಂಗ್, ನವೆಂಬರ್ 25 ರಂದು ಲಾಡ್ಮಾದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ರಿಷಿಕೇಶ್ ಕುಮಾರ್ ಅವರನ್ನು ವಿವಾಹವಾಗಲಿದ್ದಾರೆ. ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಮದುವೆ ಸಮಾರಂಭದ ವ್ಯಾಪ್ತಿಯನ್ನು ಗಮನಿಸಿದರೆ, ಇಲ್ಲಿ ಸುಮಾರು 4 ಲಕ್ಷ ಜನರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದು ದೇಶದ ಹಲವು ಸಣ್ಣ ನಗರಗಳ ಒಟ್ಟು ಜನಸಂಖ್ಯೆಗೆ ಸಮನಾಗಿದೆ.

ಉತ್ತರ ಪ್ರದೇಶದ ಮೌ(Mau) ಪಟ್ಟಣದ ಕುಶಲಕರ್ಮಿಗಳಿಗೆ ಮದುವೆಯ ಪೆಂಡಾಲ್ ಮತ್ತು ಹಾರ ಬದಲಾಯಿಸುವ ವೇದಿಕೆಯನ್ನು ನಿರ್ಮಿಸುವ ಜವಾಬ್ದಾರಿ ನೀಡಲಾಗಿದೆ. ಈ ಪೆಂಡಾಲ್ ನವೆಂಬರ್ 20 ರೊಳಗೆ ಪೂರ್ಣಗೊಳ್ಳಲಿದೆ.

ಈ ಮದುವೆಯಲ್ಲಿ ವಿವಿಐಪಿ (VVIP) ಅತಿಥಿಗಳಿಗಾಗಿ ಪ್ರತ್ಯೇಕ ಪೆಂಡಾಲ್ ಅನ್ನು ನಿರ್ಮಿಸಲಾಗುತ್ತಿದೆ. ವಧು-ವರರಿಗಾಗಿ 100 ಅಡಿ ಉದ್ದದ ಕಾಂಕ್ರೀಟ್ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಈ ಸಂಪೂರ್ಣ ವೇದಿಕೆಯನ್ನು 150 ಕ್ವಿಂಟಾಲ್ ತೂಕದ ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗುತ್ತಿದ್ದು, ಇದರ ಮೇಲೆ ಶಿವಾಂಗಿ ಸಿಂಗ್ ಮತ್ತು ಅವರ ಭಾವಿ ಸಂಗಾತಿ ರಿಷಿಕೇಶ್ ಕುಮಾರ್ ಒಟ್ಟಿಗೆ ಕುಳಿತುಕೊಳ್ಳಲಿದ್ದಾರೆ.

ಚಿತ್ರೋದ್ಯಮ ಮತ್ತು ರಾಜಕೀಯ ಕ್ಷೇತ್ರಗಳ ಗಣ್ಯರಿಗೂ ಈ ಅದ್ಧೂರಿ ಮದುವೆಗೆ ಆಹ್ವಾನ ನೀಡಲಾಗಿದ್ದು, ಅವರಲ್ಲಿ ಅನೇಕರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಸೋನು ಸೂದ್, ಮನೋಜ್ ತಿವಾರಿ, ಮೈಥಿಲಿ ಠಾಕೂರ್, ಅಕ್ಷರಾ ಸಿಂಗ್ ಮತ್ತು ಪವನ್ ಸಿಂಗ್ ಸೇರಿದಂತೆ ಬಾಲಿವುಡ್‌ನ ಸುಮಾರು ಮೂರು ಡಜನ್ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ನೀಡಲಾಗುವುದು ಎಂದು ಸಿಂಗ್ ತಿಳಿಸಿದ್ದಾರೆ.

"ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕೇವಲ ಬಿಹಾರದಿಂದಷ್ಟೇ ಅಲ್ಲ, ಭಾರತ ಮತ್ತು ಪಾಕಿಸ್ತಾನದಾದ್ಯಂತ ಇರುವವರಿಗೆ ಆಹ್ವಾನ ಕಳುಹಿಸಲಾಗಿದೆ... ಆಡಳಿತ ಮತ್ತು ವಿರೋಧ ಪಕ್ಷಗಳ ರಾಜಕಾರಣಿಗಳಿಗೂ ಆಹ್ವಾನ ನೀಡಲಾಗಿದೆ. ಮದುವೆಯ ಸಮಾರಂಭದಲ್ಲಿ ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಂಬ ಭೇದಭಾವವಿರುವುದಿಲ್ಲ. ಕಲಾವಿದರು ಕೂಡ ಆಗಮಿಸುತ್ತಿದ್ದಾರೆ... ಪ್ರಧಾನಿ ಮೋದಿ ಅವರಿಗೂ ಆಹ್ವಾನ ಪತ್ರಿಕೆಯನ್ನು ನೀಡಲಾಗುವುದು," ಎಂದು ಸಿಂಗ್ ಹೇಳಿರುವುದಾಗಿ ಎಎನ್‌ಐ (ANI) ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬೆಂಗಳೂರಿಗರಿಗೆ ಭೂ ಗ್ಯಾರಂಟಿ ಘೋಷಿಸಿದ CM ಡಿಕೆಶಿ; ಅಕ್ರಮ ಮನೆಗಳ ಸಕ್ರಮ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ!

ಪಟಾಕಿಗಳಿಂದ ಬಾಲಿವುಡ್ ನಟನ ಮನೆಗೆ ಬೆಂಕಿ; ಹೊತ್ತಿ ಉರಿದ ಬಾಲ್ಕನಿ! ಅನುಮತಿ ನೀಡುವುದೇ ಮೂರ್ಖತನ: ಪಿರ್ಜಾದಾ ಕಿಡಿ

ಅತ್ಯಾಚಾರ, ಸುಲಿಗೆ ಪ್ರಕರಣ: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಟಿಎಂಸಿ ಶಾಸಕರ ಬಂಧನ

ಸಿದ್ದರಾಮಯ್ಯ ವಿರುದ್ಧದ 'ಸ್ಟಿಂಗ್ ಆಪರೇಷನ್' ಪ್ರಕರಣ: ಸಿಸಿಬಿ ವಿಚಾರಣೆಗೆ ಹಾಜರಾದ ಕೃಪಾ ಆಳ್ವ!

'ಇಡೀ ದೇಶ ಹುಡುಕಿದ್ರೂ ಅವಳಂತಹ ಮತ್ತೊಬ್ಬ ಸೀತೆ ಸಿಗಲ್ಲ': ಟ್ರೋಲ್‌ಗೆ ಗುರಿಯಾದ ಸಾಯಿ ಪಲ್ಲವಿ ಪರ ಧನುಷ್ ಬ್ಯಾಟಿಂಗ್ Video