ದಟ್ಟ ಹೊಗೆ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ 
ದೇಶ

ದೆಹಲಿಯಲ್ಲಿ ವಿಷಗಾಳಿಯ ಪ್ರಕೋಪ: ಅಪಾಯಕಾರಿ ಮಟ್ಟಕ್ಕೆ ತಲುಪಿದ ವಾಯುಮಾಲಿನ್ಯ; 1,331ಕ್ಕೆ ಏರಿದ AQI, ದಟ್ಟ ಹೊಗೆ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧಗಳಿದ್ದರೂ ಭಾನುವಾರ ಸಂಜೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಜನರು ನಿರಂತರವಾಗಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ಈಗಾಗಲೇ ಕಲುಷಿತಗೊಂಡಿದ್ದ ವಾತಾವರಣಕ್ಕೆ ಮತ್ತಷ್ಟು ಹೊಗೆ ಹಾಗೂ ಸೂಕ್ಷ್ಮ ಧೂಳಿನ ಕಣಗಳು ಸೇರಿಕೊಂಡಿವೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ನಿವಾಸಿಗಳು ಉಸಿರಾಡಲು ಪರದಾಡುವಂತಾಗಿದೆ.

ಇಂದು ಮುಂಜಾನೆ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 637 ರ ಅಪಾಯಕಾರಿ ಮಟ್ಟ ದಾಖಲಿಸಿದೆ. ಇನ್ನು ಆತಂಕಕಾರಿ ವಿಷಯವೆಂದರೆ, ತಡರಾತ್ರಿ 1:31 ರ ಸುಮಾರಿಗೆ ಮಾಲಿನ್ಯದ ಮಟ್ಟ ಬರೋಬ್ಬರಿ 1,331 ಕ್ಕೆ ಏರಿಕೆ ಕಂಡು ಇತಿಹಾಸದಲ್ಲೇ ಅತ್ಯಂತ ಕರಾಳ ಸ್ಥಿತಿಗೆ ತಲುಪಿತ್ತು.

ಕಳೆದ ವರ್ಷ ದೀಪಾವಳಿಯ ಮರುದಿನವಾದ 2025ರ ಅಕ್ಟೋಬರ್ 21ರಂದು ಇದೇ ಸಂದರ್ಭದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 393 ದಾಖಲಾಗಿತ್ತು. ಆದರೆ, ಈ ಬಾರಿ ಬೆಳಗಿನ ವೇಳೆಯಲ್ಲೇ ಅದು ಶೇಕಡಾ 69ರಷ್ಟು ಹೆಚ್ಚಾಗಿರುವುದು ಹಬ್ಬದ ಬಳಿಕ ದೆಹಲಿಯ ವಾಯುಮಾಲಿನ್ಯ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ.

ಪಟಾಕಿ ಸಿಡಿಸುವುದರ ಮೇಲೆ ನಿರ್ಬಂಧಗಳಿದ್ದರೂ ಭಾನುವಾರ ಸಂಜೆ ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಜನರು ನಿರಂತರವಾಗಿ ಪಟಾಕಿ ಸಿಡಿಸಿದ್ದಾರೆ. ಇದರಿಂದ ಈಗಾಗಲೇ ಕಲುಷಿತಗೊಂಡಿದ್ದ ವಾತಾವರಣಕ್ಕೆ ಮತ್ತಷ್ಟು ಹೊಗೆ ಹಾಗೂ ಸೂಕ್ಷ್ಮ ಧೂಳಿನ ಕಣಗಳು ಸೇರಿಕೊಂಡಿವೆ.

ದೆಹಲಿಯ ವಿವಿಧ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲೂ ಇದೇ ರೀತಿಯ ಭಾರೀ ಮಾಲಿನ್ಯ ದಾಖಲಾಗಿದೆ. ನಗರದಾದ್ಯಂತ ದಟ್ಟವಾದ ಬೂದು ಬಣ್ಣದ ಹೊಗೆ ಆವರಿಸಿದ್ದು, ರಸ್ತೆಗಳು ಹಾಗೂ ಎತ್ತರದ ಕಟ್ಟಡಗಳು ಮಂಜಿನ ಪದರದ ಹಿಂದೆ ಮರೆಯಾಗಿವೆ. ಇದರಿಂದ ವಾಹನ ಸವಾರರಿಗೆ ಗೋಚರತೆಯೂ ಕಡಿಮೆಯಾಗಿದೆ.

ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್ ಸಾಂಪ್ರದಾಯಿಕ ಪಟಾಕಿಗಳ ಬಳಕೆಗೆ ನಿರ್ಬಂಧ ವಿಧಿಸಿತ್ತು. ನಿಗದಿತ ಷರತ್ತುಗಳೊಂದಿಗೆ ಶನಿವಾರ ಮತ್ತು ಭಾನುವಾರ ಮೂರು ಗಂಟೆಗಳ ಅವಧಿಯಲ್ಲಿ ಅನುಮೋದಿತ ಹಸಿರು ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿತ್ತು.

ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳಿಂದ ಹೊರಸೂಸುವ ಮಾಲಿನ್ಯ ಕಡಿಮೆಯಿದ್ದರೂ ಅವು ಸಂಪೂರ್ಣವಾಗಿ ಮಾಲಿನ್ಯರಹಿತವಲ್ಲ. ಅವುಗಳಿಂದಲೂ ಸೂಕ್ಷ್ಮ ಧೂಳಿನ ಕಣಗಳು ಸೇರಿದಂತೆ ವಿವಿಧ ಮಾಲಿನ್ಯಕಾರಕಗಳು ವಾತಾವರಣ ಸೇರುತ್ತವೆ.

ಮೂರು ಕೋಟಿಗೂ ಅಧಿಕ ಜನರು ವಾಸಿಸುವ ದೆಹಲಿ-ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಚಳಿಗಾಲದ ತಿಂಗಳುಗಳಲ್ಲಿ ವಾಯುಮಾಲಿನ್ಯ ತೀವ್ರಗೊಳ್ಳುವುದು ಪ್ರತಿವರ್ಷದ ಸಮಸ್ಯೆಯಾಗಿದೆ. ದೀಪಾವಳಿ ಪಟಾಕಿಗಳು, ವಾಹನಗಳ ಹೊಗೆ, ಕೈಗಾರಿಕಾ ಚಟುವಟಿಕೆಗಳು, ನಿರ್ಮಾಣ ಕಾಮಗಾರಿಗಳ ಧೂಳು ಹಾಗೂ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಭತ್ತದ ಕೊಯ್ಲು ಮುಗಿದ ಬಳಿಕ ಮುಂದಿನ ಬೆಳೆಗೆ ಜಮೀನು ಸಿದ್ಧಪಡಿಸುವ ಉದ್ದೇಶದಿಂದ ಪಂಜಾಬ್ ಮತ್ತು ಹರಿಯಾಣದ ರೈತರು ಉಳಿದ ಬೆಳೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಾರೆ. ಈ ಬೆಂಕಿಯಿಂದ ಹೊರಬರುವ ಹೊಗೆ ಗಾಳಿಯ ಮೂಲಕ ರಾಷ್ಟ್ರ ರಾಜಧಾನಿಯತ್ತ ಸಾಗುತ್ತದೆ. ಇದರಿಂದ ಸ್ಥಳೀಯ ಮಾಲಿನ್ಯದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ.

ಅಕ್ಟೋಬರ್ ಅಂತ್ಯ ಮತ್ತು ನವೆಂಬರ್ ತಿಂಗಳಲ್ಲಿ ತಾಪಮಾನ ಕುಸಿತ, ಗಾಳಿಯ ವೇಗ ಕಡಿಮೆಯಾಗುವುದು ಹಾಗೂ ವಾತಾವರಣದಲ್ಲಿ ಗಾಳಿಯ ಚಲನೆ ಸ್ಥಗಿತಗೊಳ್ಳುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಇದರಿಂದ ಮಾಲಿನ್ಯಕಾರಕಗಳು ವಾತಾವರಣದಿಂದ ಹೊರಹೋಗದೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆಯ ಪದರ ಹಲವು ದಿನಗಳ ಕಾಲ ಉಳಿಯುತ್ತದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಅಧಿಕಾರಿಗಳು ನಿರ್ಮಾಣ ಚಟುವಟಿಕೆಗಳ ಮೇಲೆ ನಿರ್ಬಂಧ, ಡೀಸೆಲ್ ಜನರೇಟರ್‌ಗಳ ಬಳಕೆಗೆ ಕಡಿವಾಣ ಹಾಗೂ ಪಟಾಕಿ ಸಿಡಿಸುವುದರ ಮೇಲೆ ನಿಯಂತ್ರಣ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಪ್ರತಿವರ್ಷ ಚಳಿಗಾಲದಲ್ಲಿ ಉಂಟಾಗುವ ತೀವ್ರ ವಾಯುಮಾಲಿನ್ಯವನ್ನು ತಡೆಯಲು ಈ ಕ್ರಮಗಳು ಪರಿಣಾಮಕಾರಿಯಾಗಿಲ್ಲ.

ಪದೇಪದೇ ಎದುರಾಗುತ್ತಿರುವ ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶುದ್ಧ ಇಂಧನ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಾಹನಗಳಿಂದ ಹೊರಸೂಸುವ ಹೊಗೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West Asia war: 'ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ, ಇಲ್ಲದಿದ್ದರೆ ನರಕ ಸೃಷ್ಟಿಸುತ್ತೇವೆ': ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಇರಾನ್ ಖಡಕ್ ಎಚ್ಚರಿಕೆ..!

DC ಹುದ್ದೆಯಲ್ಲಿ ಮುಂದುವರಿಯಲು 75 ಲಕ್ಷ ರೂ. ಲಂಚ?: ಹಾಸನ ಜಿಲ್ಲಾಡಳಿತದಲ್ಲಿ ಸಂಚಲನ ಸೃಷ್ಟಿಸಿದ ವಾಟ್ಸ್‌ಆ್ಯಪ್ ಚಾಟ್, ತನಿಖೆಗೆ HDK ಒತ್ತಾಯ..!

ವಾಹನ ಸವಾರರೇ ಗಮನಿಸಿ: ಮೇಖ್ರಿ ಸರ್ಕಲ್ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಆರಂಭ; ಮುಂದಿನ 18 ತಿಂಗಳು ಸಂಚಾರ ಬದಲಾವಣೆ..!

ಒಂದೇ ತಿಂಗಳಲ್ಲಿ LPG ದರ ಕೆ.ಜಿಗೆ 11 ರೂ. ಹೆಚ್ಚಳ: ಆಟೋ ಚಾಲಕರಿಗೆ ಗಾಯದ ಮೇಲೆ ಬರೆ, ಪ್ರಯಾಣ ದರ ಮಾತ್ರ ಯಥಾಸ್ಥಿತಿ..!

ರಾಜ್ಯದಲ್ಲಿ ತಾರಕಕ್ಕೇರಿದ ಪೋಸ್ಟರ್ ವಾರ್: ಕಾಂಗ್ರೆಸ್-BJP ನಡುವೆ ತೀವ್ರ ವಾಕ್ಸಮರ..!