ಪವನ್ ಕಲ್ಯಾಣ್ ಮತ್ತು ರೇಣುದೇಸಾಯಿ 
ದೇಶ

'ಗಂಡು ಎಷ್ಟು ಮದುವೆಯಾದರೂ ತಪ್ಪಿಲ್ಲ, ಹೆಣ್ಣು ಮರುಮದುವೆಯಾಗಬಾರದಾ?': ಟ್ರೋಲಿಗರಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಖಡಕ್ ತಿರುಗೇಟು!

ಪವನ್ ಕಲ್ಯಾಣ್ ಮತ್ತು ರೇಣುದೇಸಾಯಿ ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಅಂತ್ಯ ಹಾಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ ಅವರ..

ಅಮರಾವತಿ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ಮೂರನೇ ಪತ್ನಿ ಅನ್ನಾ ಕೊನಿಡೆಲಾ ಅವರಿಂದ ವಿಚ್ಛೇದನ ಘೋಷಿಸಿದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಪವನ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವ್ಯಾಪಕ ವೈರಲ್ ಆಗುತ್ತಿದೆ.

ಪವನ್ ಕಲ್ಯಾಣ್ ಮತ್ತು ರೇಣುದೇಸಾಯಿ ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಅಂತ್ಯ ಹಾಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ ಅವರ ಹಳೆಯ ಹೇಳಿಕೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ.

ಈ ಹಿಂದೆ ತಾವು ಮರುಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹಾಗೂ ಟ್ರೋಲ್‌ಗಳಿಗೆ ಗುರಿಯಾಗಿದ್ದ ರೇಣು ದೇಸಾಯಿ, ಆಗ ಟೀಕಾಕಾರರಿಗೆ ಖಡಕ್ ಉತ್ತರ ನೀಡಿದ್ದರು. ಪುರುಷರು ಎಷ್ಟು ಮದುವೆಯಾದರೂ ಸಮಾಜ ಒಪ್ಪಿಕೊಳ್ಳುತ್ತದೆ. ಆದರೆ ಮಹಿಳೆಯರು ಮತ್ತೊಂದು ಸಂಬಂಧದ ಬಗ್ಗೆ ಯೋಚಿಸಿದರೂ ಅದನ್ನು ತಪ್ಪಾಗಿ ನೋಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

'ಗಂಡಸರು ಹಲವು ಮದುವೆಯಾಗಬಹುದು, ಹೆಣ್ಣು ಯಾಕೆ ಆಗಬಾರದು?'

ಎಬಿಎನ್ ತೆಲುಗುಗೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೇಣು ದೇಸಾಯಿ, "ನಮ್ಮ ಸಮಾಜದಲ್ಲಿ ಪುರುಷರು ಏನು ಬೇಕಾದರೂ ಮಾಡಬಹುದು. ಎಷ್ಟು ಬಾರಿ ಬೇಕಾದರೂ ಮದುವೆಯಾಗಬಹುದು.

ಆದರೆ ಮಹಿಳೆಯೊಬ್ಬಳು ಮತ್ತೊಂದು ಸಂಬಂಧದ ಬಗ್ಗೆ ಯೋಚಿಸುವುದೂ ಪಾಪ ಎಂಬಂತೆ ನೋಡಲಾಗುತ್ತದೆ. ಹಾಗಾದರೆ ಮಹಿಳೆಯೊಬ್ಬಳು ಜೀವನಪೂರ್ತಿ ಒಬ್ಬಂಟಿಯಾಗಿಯೇ, ಹಿಂದಿನ ಜೀವನದ ನೋವಿನೊಂದಿಗೆ ಬದುಕಬೇಕೇ?" ಎಂದು ಪ್ರಶ್ನಿಸಿದ್ದರು.

ಮರುಮದುವೆ ಮತ್ತು ಪ್ರೀತಿಯ ವಿಚಾರವಾಗಿಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

"ಕಳೆದ ವರ್ಷದವರೆಗೂ ಮದುವೆ, ಪ್ರೀತಿ ಯಾವುದರ ಬಗ್ಗೆಯೂ ಯೋಚಿಸದಷ್ಟು ನನ್ನ ಮನಸ್ಸು ಮುಚ್ಚಿಹೋಗಿತ್ತು. ಈಗಲೂ ಪ್ರೀತಿಯ ಬಗ್ಗೆ ನನಗೆ ಅಷ್ಟೊಂದು ನಿರೀಕ್ಷೆಗಳಿಲ್ಲ. ಸಿನಿಮಾಗಳಲ್ಲಿ ತೋರಿಸುವಂತಹ ರೊಮ್ಯಾಂಟಿಕ್ ಪ್ರೀತಿ ಬೇಕೆಂದೇನಿಲ್ಲ. ಆದರೆ ಜೀವನದಲ್ಲಿ ಜೊತೆಯಾಗಿರಲು ಒಬ್ಬ ಸಂಗಾತಿ ಬೇಕು" ಎಂದು ಹೇಳಿದ್ದರು.

ಪವನ್ ಕಲ್ಯಾಣ್-ಅನ್ನಾ ದಂಪತಿ ದೂರ-ದೂರ

ಇದೀಗ ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಅನ್ನಾ ಕೊನಿಡೆಲಾ 13 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಮಂಗಳವಾರ ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಮತ್ತು ಗೌರವದೊಂದಿಗೆ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.

"ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಭವಿಷ್ಯವೇ ನಮ್ಮ ಮೊದಲ ಆದ್ಯತೆಯಾಗಿರಲಿದೆ" ಎಂದು ಹೇಳಿದ್ದಾರೆ.

ಅಲ್ಲದೆ, ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಪವನ್ ಕಲ್ಯಾಣ್ ಅವರ ವಿಚ್ಛೇದನದ ಸುದ್ದಿ ಹೊರಬಿದ್ದ ಬೆನ್ನಲ್ಲೇ ರೇಣು ದೇಸಾಯಿ ಅವರ ಹಿಂದಿನ ಹೇಳಿಕೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

ಅಮೆರಿಕ ರಾಜಕೀಯದಲ್ಲಿ ಹೈಡ್ರಾಮಾ: ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಸೋಲು, Trump ಬೆಂಬಲಕ್ಕೆ ನಿಂತ ರಿಪಬ್ಲಿಕನ್ನರು..!

ಪಡಿತರ ಚೀಟಿದಾರರಿಗೆ ಸಿಹಿಸುದ್ದಿ: ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ; ಮೊಬೈಲ್‌ನಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ...

ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ: ಮೆಹ್ರೌಲಿ ತೋಟದಲ್ಲಿ ನಡೆದಿತ್ತು ಆ ಪುಟ್ಟ ಕಂದನ ಅಂತ್ಯಕ್ರಿಯೆ, 57 ವರ್ಷಗಳ ಬಳಿಕ ಮನದ ನೋವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ..!

ಮೊದಲ ಕಂತಿನಲ್ಲಿ ಕಡಿಮೆ ಹಣ: ಅರ್ಹ ಪ್ರತಿಯೊಬ್ಬ ಅನ್ನದಾತನಿಗೂ ಕನಿಷ್ಠ 5,000 ರೂ. ಪರಿಹಾರ; ಬರದಿಂದ ಕಂಗೆಟ್ಟ ರೈತರಿಗೆ ಸರ್ಕಾರ ಅಭಯ..!