ಮಹಿಳೆಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಾಮುಕ 
ದೇಶ

ರಾಕ್ಷಸ ಕೃತ್ಯ; ಮಹಿಳೆಗೆ ಲೈಂಗಿಕ ಕಿರುಕುಳ, ವಿರೋಧಿಸಿದ್ದಕ್ಕೆ ರೈಲಿನಿಂದ ತಳ್ಳಿದ ಕಾಮುಕ; ಸಿಸಿಟಿವಿಯಲ್ಲಿ ಕೃತ್ಯ ಸೆರೆ! Video

ನವೆಂಬರ್ 4ರಂದು ನಾಯ್ಗಾಂವ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಭಾಯಂದರ್ ರೈಲ್ವೆ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಗುರುವಾರ ಆರೋಪಿ ಜಿತೇಂದ್ರ ಹಿರ್ಮುಖೆ (53)...

ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಅದನ್ನು ವಿರೋಧಿಸಿದ ಕಾರಣಕ್ಕೆ ರೈಲಿನಿಂದ ಕೆಳಕ್ಕೆ ತಳ್ಳಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.

ರೈಲಿನಿಂದ ಬಿದ್ದ ಪರಿಣಾಮ 20 ವರ್ಷದ ಯುವತಿ ತನ್ನ ಎಡಗೈಯನ್ನು ಕಳೆದುಕೊಂಡಿದ್ದಾರೆ. ಈ ಕೃತ್ಯ ಎಸಗಿದ 53 ವರ್ಷದ ಆರೋಪಿಯು ಘಟನೆಯ ಬಳಿಕ ರೈಲು ನಿಲ್ದಾಣದಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನವೆಂಬರ್ 4ರಂದು ನಾಯ್ಗಾಂವ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ ಭಾಯಂದರ್ ರೈಲ್ವೆ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಗುರುವಾರ ಆರೋಪಿ ಜಿತೇಂದ್ರ ಹಿರ್ಮುಖೆ (53) ಎಂಬಾತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ.

ಸಿಸಿಟಿವಿಯಲ್ಲಿ ಆರೋಪಿ ಸೆರೆ

ಆರೋಪಿ ಕೆಂಪು ಬಣ್ಣದ ಅಂಗಿ ಧರಿಸಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ವೇಗವಾಗಿ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಜನಸಂದಣಿಯ ನಡುವೆ ಸಾಗುವ ಆತ, ಮತ್ತೊಬ್ಬ ಪ್ರಯಾಣಿಕನೊಂದಿಗೆ ಕೆಲಕಾಲ ಮಾತನಾಡಿ ಬಳಿಕ ಕ್ಯಾಮೆರಾ ಕಣ್ತಪ್ಪಿಸುತ್ತಾನೆ.

ನಂತರ ಮತ್ತೊಂದು ದೃಶ್ಯದಲ್ಲಿ ಮತ್ತೆ ಕಾಣಿಸಿಕೊಳ್ಳುವ ಆತ, ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಾನೆ. ಈ ವೇಳೆ ಆತಂಕಗೊಂಡಂತೆ ಕಾಣುವ ಆರೋಪಿ, ಹಣೆಯ ಮೇಲೆ ಕೈಯಿಟ್ಟುಕೊಂಡು ಅಲ್ಲಿಂದ ತೆರಳುತ್ತಿರುವುದು ಸೆರೆಯಾಗಿದೆ ಎಂದು ವರದಿಯಾಗಿದೆ.

ಆಗಿದ್ದೇನು?

ನವೆಂಬರ್ 4ರಂದು ಸಂತ್ರಸ್ತ ಯುವತಿ ಬೋರಿವಲಿ ನಿಲ್ದಾಣದಿಂದ ವಿರಾರ್‌ಗೆ ತೆರಳುವ ಲೋಕಲ್ ರೈಲು ಹತ್ತಿದ್ದರು. ರೈಲು ನಾಯ್ಗಾಂವ್ ನಿಲ್ದಾಣದ ಸಮೀಪಿಸುತ್ತಿದ್ದಂತೆ ಸಹಪ್ರಯಾಣಿಕನಾಗಿದ್ದ ಆರೋಪಿ ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಲು ಆರಂಭಿಸಿದ್ದಾನೆ.

ಇದನ್ನು ಯುವತಿ 'ಕೆಟ್ಟ ಸ್ಪರ್ಶ' ಎಂದು ವಿವರಿಸಿದ್ದು, ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಯುವತಿ ತನ್ನ ಚಪ್ಪಲಿಯಿಂದ ಆರೋಪಿಗೆ ಹೊಡೆದಿದ್ದಾರೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇತರ ಪ್ರಯಾಣಿಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಆರೋಪಿ ಯುವತಿಗೆ ನಿಂದಿಸಿ, ತನ್ನ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ದೂರು ದಾಖಲು

ರೈಲು ನಾಯ್ಗಾಂವ್ ನಿಲ್ದಾಣ ತಲುಪಿದ ಬಳಿಕವೂ ಇಬ್ಬರ ನಡುವಿನ ಜಗಳ ಮುಂದುವರಿದಿದೆ. ಈ ವೇಳೆ ಆರೋಪಿ ಯುವತಿಯನ್ನು ರೈಲಿನಿಂದ ಕೆಳಕ್ಕೆ ತಳ್ಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ರೈಲಿನ ಎರಡು ಬೋಗಿಗಳ ನಡುವಿನ ಅಂತರದಲ್ಲಿ ಬಿದ್ದ ಯುವತಿ, ಮೇಲಕ್ಕೆ ಏರಲು ಪ್ರಯತ್ನಿಸುತ್ತಿದ್ದಾಗ ರೈಲು ಚಲಿಸಲು ಆರಂಭಿಸಿದೆ. ಈ ವೇಳೆ ಆಕೆಯ ಎಡಗೈ ರೈಲಿನ ಚಕ್ರಕ್ಕೆ ಸಿಲುಕಿದೆ. ಪರಿಣಾಮ ಮೊಣಕೈ ಸಮೀಪದಿಂದ ಎಡಗೈ ತುಂಡಾಗಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ತಲೆಗೆ 16 ಹೊಲಿಗೆ ಹಾಕಲಾಗಿದೆ.

ಪೊಲೀಸ್ ಸಿಬ್ಬಂದಿ ಹಾಗೂ ಇತರ ಪ್ರಯಾಣಿಕರು ಯುವತಿಯನ್ನು ಪ್ಲಾಟ್‌ಫಾರ್ಮ್‌ಗೆ ಎತ್ತಿಕೊಂಡು ಬಂದು ರಕ್ಷಿಸಿದ್ದಾರೆ. ಘಟನೆಯ ಗೊಂದಲದ ನಡುವೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

'ನನ್ನ ಇಡೀ ಜೀವನವೇ ಹಾಳಾಗಿದೆ': ಸಂತ್ರಸ್ತೆ ಅಳಲು

ಸುದ್ದಿವಾಹಿನಿ ಜೊತೆ ಮಾತನಾಡಿರುವ ಸಂತ್ರಸ್ತ ಯುವತಿ, "ನಾನು ಬೋರಿವಲಿಯಿಂದ ನಾಯ್ಗಾಂವ್‌ಗೆ ತೆರಳುತ್ತಿದ್ದೆ. ರೈಲು ನಿಲ್ದಾಣ ತಲುಪುವಾಗ ವ್ಯಕ್ತಿಯೊಬ್ಬ ನನ್ನನ್ನು ಅನುಚಿತವಾಗಿ ಸ್ಪರ್ಶಿಸಲು ಆರಂಭಿಸಿದ. ನಾನು ಆತನನ್ನು ಪ್ರಶ್ನಿಸಿದೆ. ರೈಲಿನಿಂದ ಇಳಿದ ಬಳಿಕವೂ ಆತ ಕಿರುಕುಳ ನೀಡುವುದನ್ನು ನಿಲ್ಲಿಸಲಿಲ್ಲ. ಮನೆಯಲ್ಲಿ ತಾಯಿ, ತಂಗಿ ಇಲ್ಲವೇ ಎಂದು ಪ್ರಶ್ನಿಸಿದರೂ ಆತ ತನ್ನ ವರ್ತನೆ ಮುಂದುವರಿಸಿದ" ಎಂದು ನೋವು ತೋಡಿಕೊಂಡಿದ್ದಾರೆ.

"ನಾನು ಆತನನ್ನು ಬೈದೆ. ಆತ ಕೂಡ ನನ್ನನ್ನು ನಿಂದಿಸಿದ. ಆತನನ್ನು ದೂರ ಸರಿಸಲು ಚಪ್ಪಲಿಯಿಂದ ಹೊಡೆದಾಗ, ಆತ ತನ್ನ ಚಪ್ಪಲಿಯಿಂದ ನನಗೆ ಹೊಡೆದು ರೈಲಿನಿಂದ ತಳ್ಳಿದ. ನನ್ನ ಇಡೀ ಜೀವನವೇ ಹಾಳಾಗಿದೆ. ಮನೆಯ ಎಲ್ಲ ಜವಾಬ್ದಾರಿಗಳನ್ನು ನಾನೇ ನಿಭಾಯಿಸುತ್ತಿದ್ದೆ. ಈಗ ಒಂದು ಕೈಯಿಂದ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ತಲೆಗೆ 16 ಹೊಲಿಗೆ ಹಾಕಲಾಗಿದೆ. ನನಗೆ ನ್ಯಾಯ ಬೇಕು. ನಾನು ಚೇತರಿಸಿಕೊಳ್ಳಲು ಪ್ರಾರ್ಥಿಸಿ. ಆತ ಕಠಿಣ ಶಿಕ್ಷೆ ಅನುಭವಿಸಬೇಕು" ಎಂದು ಯುವತಿ ಮನವಿ ಮಾಡಿದ್ದಾರೆ.

ಸಿಸಿಟಿವಿ ಆಧಾರದಲ್ಲಿ ಆರೋಪಿಯ ಬಂಧನ

ಘಟನೆಯ ಬಳಿಕ ಆರೋಪಿ ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಪರಾರಿಯಾಗಿದ್ದ. ಆದರೆ ರೈಲ್ವೆ ಪೊಲೀಸರು ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆತನ ಗುರುತು ಪತ್ತೆಹಚ್ಚಿದ್ದಾರೆ.

"ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಗುರುತಿಸಿ ಬಂಧಿಸಿದ್ದೇವೆ" ಎಂದು ಭಾಯಂದರ್ ರೈಲ್ವೆ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಗಣಪತ್ ತುಂಭಾಡಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi visit to Bengaluru | ಕನ್ನಡ ವರನಟ ಡಾ ರಾಜ್ ಕುಮಾರ್ ಯೋಗಾಭ್ಯಾಸದಲ್ಲಿ ಮಾದರಿ: ಪ್ರಧಾನಿ ಮೋದಿ

4th ODI: ವಿಲ್ ಯಂಗ್ ಸ್ಫೋಟಕ ಶತಕ, ಭಾರತಕ್ಕೆ ಗೆಲ್ಲಲು 334 ರನ್ ಬೃಹತ್ ಗುರಿ ನೀಡಿದ ನ್ಯೂಜಿಲೆಂಡ್

ಮೈದಾನದಲ್ಲೇ ಬ್ರಾರ್ - ಟಿಮ್ ನಡುವೆ ಮತ್ತೆ ಜಗಳ: ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ವಿರಾಟ್ ಕೊಹ್ಲಿ; Video

ದಾಖಲೆ ಬರೆದ ಹಾಸನಾಂಬ ದರ್ಶನೋತ್ಸವ: 30 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ; ₹29 ಕೋಟಿ ಆದಾಯ ಸಂಗ್ರಹ!

ಜಾಗತಿಕ ಮಟ್ಟದಲ್ಲಿ Microsoft Outlook ಸ್ಥಗಿತ: ಆರಂಭಿಕ ದುರಸ್ತಿ ಕ್ರಮಗಳು ವಿಫಲ, ಸರಿಪಡಿಸಲು ಎಂಜಿನಿಯರ್‌ಗಳ ಪರದಾಟ..!