ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಕೆಲವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು "ತಮ್ಮ ಜೇಬಿನಲ್ಲಿ" ಇಟ್ಟುಕೊಂಡಂತೆ ವರ್ತಿಸುತ್ತಿದ್ದಾರೆ ಮತ್ತು ಅಧಿಕಾರದಲ್ಲಿ ಇಲ್ಲದಿದ್ದರೂ "ಅಧಿಕಾರದ ಅಮಲಿನಲ್ಲಿ" ತೇಲುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ'ದಲ್ಲಿ ಮಾತನಾಡಿದ ಮೋದಿ, ಯಾವುದೇ ನಿರ್ದಿಷ್ಟ ನಾಯಕನ ಅಥವಾ ರಾಜಕೀಯ ಪಕ್ಷದ ಹೆಸರನ್ನು ಪ್ರಸ್ತಾಪಿಸಲಿಲ್ಲ. ಇತ್ತೀಚಿನ ದಿನಗಳಲ್ಲಿ, ಕೆಲವರು ತಮ್ಮ ಜೇಬಿನಿಂದ ಸಂವಿಧಾನವನ್ನು ಹೊರತೆಗೆಯುತ್ತಾರೆ.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ತಮ್ಮ ಜೇಬಿನಲ್ಲಿಯೇ ಇವೆ ಎಂದು ಅವರು ಭಾವಿಸುತ್ತಾರೆ. ಅಧಿಕಾರದಲ್ಲಿ ಇಲ್ಲದಿದ್ದರೂ, ಅವರು ಒಂದು ರೀತಿಯ ವಿಚಿತ್ರವಾದ ಅಧಿಕಾರದ ಅಮಲಿನಲ್ಲಿರುವಂತೆ ತೋರುತ್ತದೆ ಎಂದು ಲೇವಡಿ ಮಾಡಿದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯ ಘಟನೆಯೊಂದನ್ನು ನೆನಪಿಸಿಕೊಂಡ ಮೋದಿ, ಆರ್ಥಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ ಅಗ್ರಸ್ಥಾನ ಪಡೆದಾಗ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದವರು ರಾಜ್ಯದ ಗೌರವಕ್ಕೆ ಧಕ್ಕೆ ತರಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು.
ಗುಜರಾತ್‌ಗೆ ಮೊದಲ ಸ್ಥಾನ ನೀಡಿದ ಸಂಸ್ಥೆಯು ಮಾಜಿ ಪ್ರಧಾನಿಯೊಬ್ಬರ ಹೆಸರನ್ನು ಹೊಂದಿದೆ ಎಂದು ಹೇಳಿದ ಅವರು, ಈ ಮೌಲ್ಯಮಾಪನವು ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರ ಸಂಶೋಧನೆಯ ಆಧಾರದ ಮೇಲೆ ನಡೆದಿದೆ ಎಂದು ತಿಳಿಸಿದರು. ದೆಹಲಿಯಲ್ಲಿ ಅಧಿಕಾರದಲ್ಲಿದ್ದವರಿಗೆ ಗುಜರಾತ್‌ನ ಈ ಖ್ಯಾತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಹಾಗಾಗಿ ಅವರು ಸಂಶೋಧನೆ ನಡೆಸಿದವರನ್ನೇ ಗುರಿಯಾಗಿಸಿಕೊಂಡರು, ಎಂದು ಅವರು ಹೇಳಿದರು.
ತಮ್ಮ ರಾಜಕೀಯ ಎದುರಾಳಿಗಳನ್ನು ಮತ್ತೊಮ್ಮೆ ಟೀಕಿಸಿದ ಮೋದಿ, ಪ್ರಜಾಪ್ರಭುತ್ವ ಮತ್ತು ಹುತಾತ್ಮರ ಬಗ್ಗೆ ಮಾತನಾಡುವ ಇದೇ ವ್ಯಕ್ತಿಗಳು, ತಾವು ಅಧಿಕಾರದಲ್ಲಿದ್ದಾಗ ಭಿನ್ನವಾಗಿ ವರ್ತಿಸಿದ್ದರು ಎಂದು ಹೇಳಿದರು.