ಗುರುಗ್ರಾಮ: ಗುರುಗ್ರಾಮ್‌ನ ಹಳ್ಳಿಯೊಂದರಲ್ಲಿ ಖಾಸಗಿ ಶಾಲೆ ನಡೆಸುವ ನೆಪದಲ್ಲಿ ಕೊಳೆಗೇರಿ ಮಕ್ಕಳನ್ನು ಕ್ರಿಶ್ಚಿಯನ್ ಧರ್ಮ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಘಾಟಾ ಗ್ರಾಮದ ಶಾಲೆಯ ಮೇಲೆ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಂಧಿತರನ್ನು ದೆಹಲಿಯ ಆಜಾದ್‌ಪುರ ನಿವಾಸಿ ಸುಮನ್ ಕುಮಾರಿ(21), ಮಣಿಪುರದ ಬಿಷ್ಣುಪುರ ಜಿಲ್ಲೆಯ ರಾಜಕುಮಾರಿ ಚೌಬಾ ಸಿಂಗ್(36), ಪ್ರಸ್ತುತ ಗುರುಗ್ರಾಮ್ ಸೆಕ್ಟರ್-86ರಲ್ಲಿ ನೆಲೆಸಿರುವ ನೇಪಾಳ ಮೂಲದ ಅಶ್ಮಿತಾ ಚಾಹರ್ (35), ದೆಹಲಿಯ ಕೋಟ್ಲಾದಲ್ಲಿ ವಾಸವಾಗಿರುವ ಲಾಲ್‌ನುನ್‌ಪುಯಿ(31) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಶನಿವಾರ, ಘಾಟಾ ಗ್ರಾಮದ ಎಸ್‌ಪಿಆರ್ ರಸ್ತೆಯ ಸರ್ವೀಸ್ ಸ್ಟೇಷನ್ ಬಳಿಯ ತಾತ್ಕಾಲಿಕ ಕೊಠಡಿಗಳಲ್ಲಿ ಮಹಿಳೆಯರು ಸೇರಿದಂತೆ ಕೆಲವು ಅಪರಿಚಿತ ವ್ಯಕ್ತಿಗಳು ಸ್ಲಂ ಮಕ್ಕಳಿಗಾಗಿ ಖಾಸಗಿ ಶಾಲೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳು ಮಕ್ಕಳಿಗೆ ಆಹಾರ ಪದಾರ್ಥಗಳು ಮತ್ತು ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ದೂರುದಾರರು, ಆಹಾರ ಪದಾರ್ಥಗಳು ಮತ್ತು ಇತರ ವಸ್ತುಗಳನ್ನು ನೀಡುವ ಆಮಿಷವೊಡ್ಡುವ ಮೂಲಕ ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮವನ್ನು ಅಳವಡಿಸಿಕೊಳ್ಳುವಂತೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ತಂಡವು ಶಾಲೆ ಮೇಲೆ ದಾಳಿ ನಡೆಸಿ, ಸ್ಥಳದಲ್ಲಿ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.