ಸೌರವ್ ದಾಸ್ ಲಂಡನ್ ಪ್ರಯಾಣಕ್ಕೆ ಸರ್ಕಾರ ತಡೆ; ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ CJP ಸಹ ಸಂಚಾಲಕ..!
ಲಂಡನ್‌ಗೆ ತೆರಳುವ ವಿಮಾನ ಹತ್ತುವ ಮೊದಲು ದೆಹಲಿ ವಿಮಾನ ನಿಲ್ದಾಣದ ವಲಸೆ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ತಮ್ಮನ್ನು ತಡೆದಿದ್ದಾರೆ ಎಂದು ದಾಸ್ ಆರೋಪಿಸಿದ್ದಾರೆ.
ನವದೆಹಲಿ: ಲಂಡನ್‌ಗೆ ತೆರಳುವ ವಿಮಾನವನ್ನು ಏರದಂತೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದಿರುವುದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಹ-ಸಂಚಾಲಕ ಮತ್ತು ವಕ್ತಾರ ಸೌರವ್ ದಾಸ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬುಧವಾರ (ನವೆಂಬರ್ 25) ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸೌರವ್ ದಾಸ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ನಿತಿನ್ ವಾಸುದೇವ್ ಸಾಂಬ್ರೆ ಮತ್ತು ನ್ಯಾಯಮೂರ್ತಿ ಸಂಜಯ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠವು ತುರ್ತು ವಿಚಾರಣೆಗೆ ನಿರಾಕರಿಸಿದ್ದು, ಅರ್ಜಿಯನ್ನು ಗುರುವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿದೆ.
ಲಂಡನ್‌ಗೆ ತೆರಳುವ ವಿಮಾನ ಹತ್ತುವ ಮೊದಲು ದೆಹಲಿ ವಿಮಾನ ನಿಲ್ದಾಣದ ವಲಸೆ ತಪಾಸಣಾ ಕೇಂದ್ರದಲ್ಲಿ ಅಧಿಕಾರಿಗಳು ತಮ್ಮನ್ನು ತಡೆದಿದ್ದಾರೆ ಎಂದು ದಾಸ್ ಆರೋಪಿಸಿದ್ದಾರೆ.
ವಲಸೆ ತಪಾಸಣೆ ವೇಳೆ ನನ್ನನ್ನು ತಡೆದರು. ಆದರೆ, ಯಾವುದೇ ಆದೇಶವನ್ನು ತೋರಿಸಲಿಲ್ಲ. ನನ್ನ ವಿರುದ್ಧ ಯಾವುದೇ ಲುಕ್‌ಔಟ್ ನೋಟಿಸ್ (ಎಲ್‌ಒಸಿ) ಇರಲಿಲ್ಲ ಅಥವಾ ಪ್ರಯಾಣ ನಿರ್ಬಂಧ ವಿಧಿಸಿರುವ ಯಾವುದೇ ಪ್ರಾಧಿಕಾರದ ಆದೇಶವೂ ಇರಲಿಲ್ಲ. ಹೊಸ ಅರ್ಜಿಯನ್ನು ಇಂದೇ ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡುತ್ತಿದ್ದೇನೆ. ನವೆಂಬರ್ 27ರಂದು ನಾನು ಬ್ರಿಟನ್ ತಲುಪಬಹುದು. ಅದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದಾಸ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಗುರುವಾರವೇ ವಿಮಾನವಿರುವುದರಿಂದ ತುರ್ತು ವಿಚಾರಣೆ ಅಗತ್ಯವಿದೆ ಎಂದು ವಕೀಲರು ಮನವಿ ಮಾಡಿದಾಗ, “ನಾಳೆ ವಿಚಾರಣೆಗೆ ಬರಲಿ” ಎಂದು ನ್ಯಾಯಪೀಠ ಹೇಳಿತು.
ಇದಕ್ಕೂ ಮೊದಲು ಸೋಮವಾರ, ತಮ್ಮನ್ನು ಲಂಡನ್‌ಗೆ ತೆರಳದಂತೆ ತಡೆದ ಕೇಂದ್ರ ಸರ್ಕಾರದ ವಿರುದ್ಧ ದಾಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ಗಳನ್ನು ಪ್ರಕಟಿಸಿದ್ದರು. ನಸುಕಿನ 1 ಗಂಟೆಯ ವಿಮಾನ ಹತ್ತಲು ತೆರಳಿದ್ದಾಗ ಅಧಿಕಾರಿಗಳು ತಡೆದಿದ್ದಾರೆ ಎಂದು ಅವರು ಆರೋಪಿಸಿದ್ದರು.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಲಂಡನ್‌ಗೆ ತೆರಳುತ್ತಿದ್ದ ನನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಈ ಹೇಡಿ ಮೋದಿ ಸರ್ಕಾರ ತಡೆದಿದೆ. ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಎಲ್‌ಎಸ್‌ಇ ಮತ್ತು ಎಡಿನ್‌ಬರ್ಗ್‌ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಕಾಕ್‌ರೋಚ್ ಚಳವಳಿಯ ಕುರಿತು ಮಾತನಾಡಲು ನನ್ನನ್ನು ಆಹ್ವಾನಿಸಿದ್ದವು. ಆದರೆ, ಈ ಹೇಡಿ ಸರ್ಕಾರ ಲಂಡನ್‌ಗೆ ತೆರಳಲು ವಿಮಾನ ಹತ್ತಲು ಅವಕಾಶ ನೀಡಲಿಲ್ಲ” ಎಂದು ಪೋಸ್ಟ್‌ನಲ್ಲಿ ಬರೆದಿದ್ದರು.
ಭಾರತೀಯ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ಆಯೋಜಿಸಲು ತಮ್ಮ ಶಕ್ತಿ ಮತ್ತು ಸಮಯವನ್ನು ಮೀಸಲಿಟ್ಟಿದ್ದರು. ಆದರೆ, ಬೌದ್ಧಿಕ ಚರ್ಚೆಗಳಿಗೆ ಹೆದರುವ ಈ ಸರ್ಕಾರ, ನಾನು ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ತೆರಳುವುದನ್ನು ತಡೆಯಿತು ಎಂದು ಆರೋಪಿಸಿದ್ದರು. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘವು ಪ್ಯಾನಲ್ ಚರ್ಚೆಯಲ್ಲಿ ಭಾಗವಹಿಸಲು ತಮ್ಮನ್ನು ಆಹ್ವಾನಿಸಿತ್ತು ಎಂದು ತಿಳಿಸಿದ್ದಾರೆ.
ಅದಕ್ಕಾಗಿಯೇ ನಾನು ಲಂಡನ್‌ಗೆ ತೆರಳುತ್ತಿದ್ದೆ. ಆದರೆ, ವಲಸೆ ತಪಾಸಣೆಗೆ ಹೋದಾಗ ನನ್ನ ಪಾಸ್‌ಪೋರ್ಟ್‌ಗೆ ನಿರ್ಬಂಧದ ಗುರುತು ಹಾಕಿರುವುದು ತಿಳಿಯಿತು ಎಂದು ಹೇಳಿದ್ದಾರೆ.
ಶಿಕ್ಷಿತ ಯುವಕನೊಬ್ಬ ಮತ್ತಷ್ಟು ವಿದ್ಯಾವಂತರ ನಡುವೆ ತೆರಳಿ ಬೌದ್ಧಿಕ ಚರ್ಚೆ ನಡೆಸುವುದಕ್ಕೆ ಸರ್ಕಾರವೇಕೆ ಇಷ್ಟು ಹೆದರುತ್ತಿದೆ? ನಾನು ನೀರವ್ ಮೋದಿ ಆಗಿರಬೇಕಿತ್ತು. ವಿಜಯ್ ಮಲ್ಯ ಆಗಿರಬೇಕಿತ್ತು. ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿರಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.