ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಪುಣೆ ಕೋರ್ಟ್ ಆವರಣದಲ್ಲಿ ಭೀಕರ ಹಲ್ಲೆ; ವಿಚಾರಣೆಗೆ ಬಂದಿದ್ದ ಆರೋಪಿ ಕೈ ಕಟ್; ರಕ್ತದ ಮಡುವಿನಲ್ಲೇ ಎದ್ದು ಬಂದ ಭೂಪ! Video

2 ದ್ವಿಚಕ್ರವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಂದಾರ್ ಕಿವಾಲೆ ಎಂಬ ಆರೋಪಿ ಮೇಲೆ ಮಚ್ಚಿನಿಂದ ಪದೇಪದೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೊಲೆ ಆರೋಪಿ ಮೇಲೆ ಭೀಕರ ಹಲ್ಲೆ
Srinivasa Murthy VN
Updated On : 25 Nov 2026, 5:34 pm

ಪುಣೆ: ವಿಚಾರಣೆಗೆ ಹಾಜರಾಗಲು ನ್ಯಾಯಾಲಯಕ್ಕೆ ಬಂದಿದ್ದ ಕೊಲೆ ಪ್ರಕರಣದ ಆರೋಪಿಯ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ಭೀಕರವಾಗಿ ಹಲ್ಲೆ ನಡೆಸಿ, ಗುಂಡು ಹಾರಿಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ದಾಳಿಯಲ್ಲಿ ಆರೋಪಿಯ ಒಂದು ಕೈ ತುಂಡಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ದಾಳಿಗೊಳಗಾದ ವ್ಯಕ್ತಿಯನ್ನು 35 ವರ್ಷದ ಮಂದಾರ್ ಮಾರುತಿ ಕಿವಾಲೆ ಎಂದು ಗುರುತಿಸಲಾಗಿದೆ. ಪುಣೆಯ ಶಿವಾಜಿನಗರ ನ್ಯಾಯಾಲಯದ ಆವರಣದ ಹೊರಗೆ ಈ ಘಟನೆ ನಡೆದಿದೆ.

2 ದ್ವಿಚಕ್ರವಾಹನಗಳಲ್ಲಿ ಬಂದಿದ್ದ ದುಷ್ಕರ್ಮಿಗಳ ತಂಡ ಮಂದಾರ್ ಕಿವಾಲೆ ಎಂಬ ಆರೋಪಿ ಮೇಲೆ ಮಚ್ಚಿನಿಂದ ಪದೇಪದೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಳಿಕ ಆರೋಪಿಗಳು ಗುಂಡು ಹಾರಿಸಿ, ಎರಡು ಸ್ಕೂಟರ್‌ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Advertisement

Advertisement

Also Read

ದುರಂತದ ನಂತರ ಎಚ್ಚೆತ್ತ ಸರ್ಕಾರ: ಮದ್ಯದಂಗಡಿಗಳ ಬಳಿ ವೈದ್ಯಕೀಯ ತಂಡ ನಿಯೋಜನೆ; ಕುಡುಕರ ತಪಾಸಣೆ, ವ್ಯಸನಿಗಳ ಮನವೊಲಿಸಲು ಸಮಾಲೋಚನೆ

ಕೈ ಕಟ್, ರಕ್ತದ ಮಡುವಿನಲ್ಲೇ ಎದ್ದು ಬಂದ ಭೂಪ!

ದಾಳಿಯಿಂದ ತೀವ್ರವಾಗಿ ಗಾಯಗೊಂಡ ಕಿವಾಲೆ ರಕ್ತದ ಮಡುವಿನಲ್ಲೇ ಎದ್ದು ನಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮತ್ತೊಂದು ದೃಶ್ಯದಲ್ಲಿ ಅವರು ರಸ್ತೆಯ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದು, ಅವರ ಒಂದು ಕೈ ತುಂಡಾಗಿರುವುದು ಕಂಡುಬಂದಿದೆ.

ಸುತ್ತಮುತ್ತ ಜನರು ನೆರೆದಿದ್ದರೂ ಅವರು ಅಸಹಾಯಕರಾಗಿ ಬಿದ್ದಿರುವ ದೃಶ್ಯಗಳು ಆತಂಕ ಮೂಡಿಸಿವೆ.

ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳದಿಂದ ಎರಡು ಪಿಸ್ತೂಲ್‌ಗಳು ಮತ್ತು ಒಂದು ಮ್ಯಾಗಜೀನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

2025ರ ಕೊಲೆ ಪ್ರಕರಣದ ಆರೋಪಿಯಾಗಿದ್ದ ಕಿವಾಲೆ

ಮಂದಾರ್ ಕಿವಾಲೆ 2025ರ ಏಪ್ರಿಲ್‌ನಲ್ಲಿ ಪುಣೆಯ ಸಂತೋಷನಗರ ಕತ್ರಜ್ ಪ್ರದೇಶದಲ್ಲಿ ನಡೆದ 26 ವರ್ಷದ ರೆಸ್ಟೋರೆಂಟ್ ಮಾಲೀಕ ಶುಭಂ ಸುಭಾಷ್ ಚವಾಣ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಜಮೀನು ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಕಿವಾಲೆ ಮತ್ತು ಆತನ ಸಹಚರರು ಶುಭಂ ಚವಾಣ್ ಮೇಲೆ ಕ್ರಿಕೆಟ್ ಸ್ಟಂಪ್‌ಗಳು ಹಾಗೂ ಬಿದಿರಿನ ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಅಮರ್ ಸಕೋರೆ ಹಾಗೂ ಆತನ ಸಹಚರರಾದ ಗಿರೀಶ್ ಸುಭಾಷ್ ಬಾಬರೆ ಮತ್ತು ಯೋಗೇಶ್ ಬಾಬುರಾವ್ ಡೋರೆ ಜೊತೆಗೆ ಕಿವಾಲೆಯನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಕಿವಾಲೆ, ನಾಲ್ಕು ದಿನಗಳ ಹಿಂದಷ್ಟೇ ಹೊರಬಂದಿದ್ದ ಎನ್ನಲಾಗಿದೆ. ಬುಧವಾರ ನ್ಯಾಯಾಲಯದ ವಿಚಾರಣೆಗೆ ಬಂದಿದ್ದ ವೇಳೆ ಆತನ ಮೇಲೆ ಈ ದಾಳಿ ನಡೆದಿದೆ.

Also Read

ಕರ್ನಾಟಕವನ್ನು ಅತಿಕ್ರಮಿಸಿದ್ದಾರೆ: ಕೇರಳಿಗರ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆಗೆ ವ್ಯಾಪಕ ಆಕ್ರೋಶ; Video

ಪೊಲೀಸರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಘಟನೆ ಕುರಿತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಪುಣೆ ಪೊಲೀಸ್ ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement