ಅಮೆರಿಕದ ಶೇ. 25ರಷ್ಟು ಸುಂಕ ಪ್ರಸ್ತಾವನೆಗೆ ಭಾರತ ವಿರೋಧ; ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ಆರೋಪ ನಿರಾಕರಣೆ
ಇದರ ಬೆನ್ನಲ್ಲೇ, ಅಮೆರಿಕ ನಿನ್ನೆ ಬುಧವಾರ ಭಾರತದ ಆಮದುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿದ್ದು, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಒಪ್ಪಿದರೆ ಈ ಸುಂಕವನ್ನು ಶೇ. 17ಕ್ಕೆ ಸೀಮಿತಗೊಳಿಸುವ ಅವಕಾಶ ಕಲ್ಪಿಸಿದೆ.
ಭಾರತವು ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಶೀಘ್ರ ಅಂತಿಮಗೊಳಿಸಲು ಬದ್ಧವಾಗಿದೆ ಎಂದು ಹೇಳಿದ್ದು, ಉತ್ಪಾದನಾ ವಲಯದಲ್ಲಿ ರಚನಾತ್ಮಕವಾಗಿ ಹೆಚ್ಚುವರಿ ಸಾಮರ್ಥ್ಯ ಹೊಂದಿದೆ ಎಂಬ ಅಮೆರಿಕದ ಆರೋಪವನ್ನು ತಳ್ಳಿಹಾಕಿದೆ.
ಇದರ ಬೆನ್ನಲ್ಲೇ, ಅಮೆರಿಕ ನಿನ್ನೆ ಬುಧವಾರ ಭಾರತದ ಆಮದುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವ ಪ್ರಸ್ತಾವನೆ ಮುಂದಿಟ್ಟಿದ್ದು, ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಒಪ್ಪಿದರೆ ಈ ಸುಂಕವನ್ನು ಶೇ. 17ಕ್ಕೆ ಸೀಮಿತಗೊಳಿಸುವ ಅವಕಾಶ ಕಲ್ಪಿಸಿದೆ. ಇದರಿಂದ ಏಷ್ಯಾದ ಸ್ಪರ್ಧಿ ರಾಷ್ಟ್ರಗಳಿಗಿಂತ ಭಾರತಕ್ಕೆ ಸ್ವಲ್ಪ ಅನುಕೂಲವಾಗಲಿದೆ.
ಚೀನಾ, ಯುರೋಪಿಯನ್ ಒಕ್ಕೂಟ, ಸಿಂಗಾಪುರ, ಸ್ವಿಟ್ಜರ್ಲೆಂಡ್, ಇಂಡೋನೇಷ್ಯಾ, ಮಲೇಷ್ಯಾ, ಕಾಂಬೋಡಿಯಾ, ಥಾಯ್ಲೆಂಡ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ತೈವಾನ್, ಬಾಂಗ್ಲಾದೇಶ, ಜಪಾನ್, ನಾರ್ವೆ, ಮೆಕ್ಸಿಕೊ ಮತ್ತು ಭಾರತ ಸೇರಿದಂತೆ 16 ಪ್ರಮುಖ ಆರ್ಥಿಕತೆಗಳ ಕುರಿತು ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ನಡೆಸಿದ ತನಿಖೆಯ ಬಳಿಕ ಹೊಸ ಸುಂಕ ಪ್ರಸ್ತಾವನೆ ಮುಂದಿಡಲಾಗಿದೆ.
ಉತ್ಪಾದನಾ ವಲಯಗಳಲ್ಲಿ ರಚನಾತ್ಮಕ ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಈ ತನಿಖೆ ನಡೆಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ವಾಣಿಜ್ಯ ಸಚಿವಾಲಯ, ಉತ್ಪಾದನಾ ವಲಯಗಳಲ್ಲಿನ ರಚನಾತ್ಮಕ ಹೆಚ್ಚುವರಿ ಸಾಮರ್ಥ್ಯ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಭಾರತ ಸೇರಿದಂತೆ 14 ಆರ್ಥಿಕತೆಗಳ ಕೃತ್ಯಗಳು, ನೀತಿಗಳು ಮತ್ತು ಕಾರ್ಯವಿಧಾನಗಳ ಕುರಿತು ಸೆಕ್ಷನ್ 301ರ ಅಡಿಯಲ್ಲಿ ನಡೆಸುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಅಮೆರಿಕದ ವ್ಯಾಪಾರ ಪ್ರತಿನಿಧಿ (USTR) ಹೊರಡಿಸಿರುವ ನಿರ್ಧಾರದ ಪ್ರಕಟಣೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸುವ ಸೂಚನೆಯನ್ನು ಭಾರತ ಗಮನಿಸಿದೆ ಎಂದು ತಿಳಿಸಿದೆ.
ಈ ತನಿಖೆಯ ಉದ್ದಕ್ಕೂ ಭಾರತವು ರಚನಾತ್ಮಕವಾಗಿ ಸಹಕರಿಸಿದೆ. ತನಿಖೆ ಆರಂಭಿಸುವ ಸೂಚನೆಗೆ ಪ್ರತಿಕ್ರಿಯೆಯಾಗಿ ಹಾಗೂ ನಂತರದ ವಿಚಾರಣೆಗಳಲ್ಲಿ, ಯಾವುದೇ ವಲಯದಲ್ಲೂ ಭಾರತವು ರಚನಾತ್ಮಕ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯ ಹೊಂದಿಲ್ಲ ಎಂದು ವಾಣಿಜ್ಯ ಇಲಾಖೆ ತಿಳಿಸಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಉಭಯ ದೇಶಗಳು ವ್ಯಾಪಾರ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದು, ವ್ಯಾಪಾರ ಸಂಬಂಧಿತ ಯಾವುದೇ ಆತಂಕಗಳನ್ನು ಈ ಮಾತುಕತೆಗಳ ಚೌಕಟ್ಟಿನೊಳಗೆ ಪರಿಹರಿಸಬೇಕು ಎಂಬುದು ಭಾರತದ ನಿಲುವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಏಷ್ಯಾದ ಪ್ರತಿಸ್ಪರ್ಧಿ ರಾಷ್ಟ್ರಗಳಿಗಿಂತ ಸ್ಪರ್ಧಾತ್ಮಕ ಅನುಕೂಲ ಪಡೆಯಲು ಭಾರತ ಒತ್ತಾಯಿಸಿದ್ದು, ಅಮೆರಿಕ ತನ್ನ ಸುಂಕದ ಪ್ರಸ್ತಾವನೆಯಲ್ಲಿ ಇದಕ್ಕೆ ಸ್ಪಂದಿಸಿದೆ.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಚಿಂತಕರ ಚಾವಡಿ GTRI, ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯದ ತನಿಖೆಗಳ ಅಡಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತಾಪಿಸಿರುವ ಹೊಸ ಸೆಕ್ಷನ್ 301 ಸುಂಕಗಳು, ಪರಸ್ಪರ ಸುಂಕದ ವ್ಯವಸ್ಥೆಯನ್ನು ಹೊಸ ಹೆಸರಿನಲ್ಲಿ ಮರುಸ್ಥಾಪಿಸುತ್ತಿವೆ ಎಂದು ಹೇಳಿದೆ. ನಿಜವಾದ ಕೈಗಾರಿಕಾ ಉತ್ಪಾದನೆಯ ಹೆಚ್ಚುವರಿ ಪ್ರಮಾಣವನ್ನು ಪರಿಹರಿಸುವ ಬದಲು, ಏಕಪಕ್ಷೀಯ ಹಾಗೂ ದುಬಾರಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕುವಂತೆ ವ್ಯಾಪಾರ ಪಾಲುದಾರ ರಾಷ್ಟ್ರಗಳನ್ನು ಒತ್ತಾಯಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.