Zakir Naikಗೆ ಬಿಗ್ ಶಾಕ್: ನಿಷೇಧಿತ IRF ಆಸ್ತಿಪಾಸ್ತಿ, ಬ್ಯಾಂಕ್ ಖಾತೆ ಜಪ್ತಿಗೆ ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಿಗೆ ಪರಮಾಧಿಕಾರ ಕೊಟ್ಟ ಕೇಂದ್ರ ಸರ್ಕಾರ..!
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಸಂಸ್ಥೆಯ ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ನವದೆಹಲಿ: ಪರಾರಿಯಾಗಿರುವ ವಿವಾದಿತ ಧರ್ಮಪ್ರಚಾರಕ ಝಾಕಿರ್ ನಾಯ್ಕ್‌ಗೆ ಸೇರಿದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ವಿರುದ್ಧ ಕೇಂದ್ರ ಸರ್ಕಾರ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ.
ಸಂಸ್ಥೆಯ ಹಣಕಾಸು ಸಂಪನ್ಮೂಲಗಳು, ಬ್ಯಾಂಕ್ ಠೇವಣಿಗಳು ಹಾಗೂ ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಅಧಿಕಾರ ನೀಡಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಸಂಸ್ಥೆಯ ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ಅಧಿಸೂಚನೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, UAPA ಕಾಯ್ದೆಯ ಸೆಕ್ಷನ್ 7 ಮತ್ತು 8ರ ಅಡಿಯಲ್ಲಿನ ಅಧಿಕಾರಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಿದೆ.
ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಶಂಕೆಯಿರುವ ಸಂಸ್ಥೆಯ ಹಣಕಾಸು ಸಂಪನ್ಮೂಲಗಳು ಮತ್ತು ಆವರಣಗಳ ವಿರುದ್ಧ ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಇದರಿಂದ ಅವಕಾಶ ದೊರೆಯಲಿದೆ.
UAPA ಕಾಯ್ದೆಯ ಸೆಕ್ಷನ್ 42ರ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಅಧಿಕಾರಗಳನ್ನು ವರ್ಗಾಯಿಸಿದೆ. ಈ ಕಾಯ್ದೆಯ ಸೆಕ್ಷನ್ 3(1) ಮತ್ತು 3(3)ರ ಅಡಿಯಲ್ಲಿ ನವೆಂಬರ್ 13ರಂದು ಹೊರಡಿಸಿದ ಅಧಿಸೂಚನೆಯ ಮೂಲಕ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
UAPA ಕಾಯ್ದೆಯ ಸೆಕ್ಷನ್ 7ರ ಪ್ರಕಾರ, ಕಾನೂನುಬಾಹಿರ ಸಂಘಟನೆಯ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಶಂಕೆಯಿರುವ ಹಣ, ಷೇರುಗಳು, ಭದ್ರತಾ ಪತ್ರಗಳು ಮತ್ತು ಇತರ ಹಣಕಾಸು ಆಸ್ತಿಗಳ ಬಳಕೆ ಅಥವಾ ವಹಿವಾಟುಗಳನ್ನು ನಿಷೇಧಿಸಲು ಅಧಿಕಾರಿಗಳಿಗೆ ಅವಕಾಶವಿದೆ. ಇಂತಹ ಚಟುವಟಿಕೆಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳ ತನಿಖೆಯನ್ನೂ ನಡೆಸಬಹುದು.
ಇನ್ನು ಸೆಕ್ಷನ್ 8ರ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಬಳಸುತ್ತಿದೆ ಎಂಬ ಶಂಕೆಯಿರುವ ಮನೆ, ಕಟ್ಟಡ ಮತ್ತು ಇತರ ಆವರಣಗಳನ್ನು ಅಧಿಸೂಚನೆಯ ಮೂಲಕ ಗುರುತಿಸಬಹುದು.
ಒಮ್ಮೆ ಈ ಆಸ್ತಿಗಳನ್ನು ಅಧಿಸೂಚನೆಗೊಳಿಸಿದ ಬಳಿಕ ಅವುಗಳಿಗೆ ಪ್ರವೇಶಿಸುವುದನ್ನು ನಿಯಂತ್ರಿಸುವುದರ ಜೊತೆಗೆ, ಅಲ್ಲಿರುವ ಚರಾಸ್ತಿಗಳ ಬಳಕೆಯ ಮೇಲೆಯೂ ನಿರ್ಬಂಧ ವಿಧಿಸಬಹುದು.
ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅನ್ನು ಮೊದಲ ಬಾರಿಗೆ 2016ರಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿತ್ತು. ಇದೀಗ ಸಂಸ್ಥೆಯ ಮೇಲಿನ ನಿಷೇಧವನ್ನು ಮತ್ತೆ ಐದು ವರ್ಷಗಳ ಕಾಲ ವಿಸ್ತರಿಸಿರುವ ಕೇಂದ್ರ ಸರ್ಕಾರ, ಅದರ ಹಣಕಾಸು ಸಂಪನ್ಮೂಲಗಳು ಮತ್ತು ಆಸ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ನೀಡಿದೆ.