Video: ಮೋಕ್ಷ ಪ್ರಾಪ್ತಿಗಾಗಿ ಗುಹೆಗೆ ನುಗ್ಗಿದ ಮಹಿಳೆ, ಹೊರ ಬರಲಾರದೆ ಪರದಾಟ; ನೆಟ್ಟಿಗರು ಫುಲ್ ಕ್ಲಾಸ್! ಇಷ್ಟಕ್ಕೂ ಏನಿದು ಮೋಕ್ಷ ಮಾರ್ಗಂ?
ತಿರುವಣ್ಣಾಮಲೈನ ಇಡುಕ್ಕು ಪಿಳ್ಳೈಯಾರ್ ದೇವಸ್ಥಾನದ ಸಮೀಪದ ಈ ಕಿರಿದಾದ ಹಾದಿಯಲ್ಲಿ ಮಹಿಳೆ ಸಿಲುಕಿರುವ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಚೆನ್ನೈ: ಮೋಕ್ಷ ಪಡೆಯಲು ಹೋಗಿ ಕಲ್ಲಿನ ಕಿರಿದಾದ ಗುಹೆಯೊಳಗೆ ಮಹಿಳೆ ಸಿಲುಕಿ ಪರದಾಡಿದ ಘಟನೆ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನದ ಬಳಿ ಇರುವ ಕಿರಿದಾದ ‘ಮೋಕ್ಷ ಮಾರ್ಗಂ’ ಹಾದಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಕಿರಿದಾದ ಗುಹೆಯೊಳಗೆ ಮಹಿಳೆಯೊಬ್ಬರು ಸಿಲುಕಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅತ್ಯಂತ ಕಿರಿದಾದ ಬಂಡೆ ಸಂದಿಯಲ್ಲಿ ಮುಂದೆ ಸಾಗಲಾಗದೆ ಮಹಿಳೆ ಸಹಾಯಕ್ಕಾಗಿ ಕೂಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಬಳಿಕ ಅಲ್ಲಿದ್ದ ಭಕ್ತರು ಹರಸಾಹಸಪಟ್ಟು ಅವರನ್ನು ಸುರಕ್ಷಿತವಾಗಿ ಹೊರಗೆಳೆದಿದ್ದಾರೆ.
ಆದರೆ ಈ ಬಗ್ಗೆ ದೇಗುಲದ ಆಡಳಿತ ಮಂಡಳಿ ಈ ವರೆಗೂ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ.
ವರದಿಯಲ್ಲಿರುವಂತೆ ತಿರುವಣ್ಣಾಮಲೈನ ಇಡುಕ್ಕು ಪಿಳ್ಳೈಯಾರ್ ದೇವಸ್ಥಾನದ ಸಮೀಪದ ಈ ಕಿರಿದಾದ ಹಾದಿಯಲ್ಲಿ ಮಹಿಳೆ ಸಿಲುಕಿರುವ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಮಹಿಳೆ ಹೊರಬರಲು ಸಾಧ್ಯವಾಗದೆ ಒದ್ದಾಡುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ.
ನೆಟ್ಟಿಗರು ಫುಲ್ ಕ್ಲಾಸ್!
ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇಷ್ಟು ಕಿರಿದಾದ ಜಾಗದೊಳಗೆ ಸ್ವಯಂಪ್ರೇರಿತವಾಗಿ ನುಗ್ಗಿ ಜೀವಕ್ಕೆ ಅಪಾಯ ತಂದುಕೊಳ್ಳುವ ಅಗತ್ಯವೇನಿತ್ತು ಎಂದು ಹಲವರು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು, “ಆಕೆ ಒಳಗೆ ಹೇಗೆ ಹೋದರು? ಹೊರಗೆಳೆಯುವಾಗ ಕೈಯಲ್ಲಿದ್ದ ಬ್ಯಾಗ್ ಅನ್ನು ಯಾಕೆ ಕೊಡುತ್ತಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಯಾವುದೇ ಕಾರಣವಿಲ್ಲದೆ ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಮಲಿಯಾಳಿ ಚಿತ್ರದಲ್ಲೂ ಇಂತಹುದೇ ಘಟನೆ
ಕೆಲವರು ಈ ದೃಶ್ಯವನ್ನು ಜನಪ್ರಿಯ ಮಲಯಾಳಂ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’ಗೆ ಹೋಲಿಸಿದ್ದಾರೆ. “ಮಂಜುಮ್ಮೆಲ್ ಬಾಯ್ಸ್ ಅಲ್ಲ, ಮಂಜುಮ್ಮೆಲ್ ಲೇಡಿ” ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇದೇ ಮೊದಲೇನಲ್ಲ
ಈ ಘಟನೆ ಗಂಭೀರ ಚರ್ಚೆಗೆ ಕಾರಣವಾಗಿರುವುದಕ್ಕೆ ಮತ್ತೊಂದು ಹಿನ್ನೆಲೆಯೂ ಇದೆ. ಇದೇ ವರ್ಷದ ಜುಲೈನಲ್ಲಿ ಆಂಧ್ರಪ್ರದೇಶದ 36 ವರ್ಷದ ಭಕ್ತ ಮಾಣಿಕುಮಾರ್ ಎಂಬವರು ಇದೇ ಕಿರಿದಾದ ಹಾದಿಯಲ್ಲಿ ಸಿಲುಕಿ ಮೃತಪಟ್ಟಿದ್ದರು ಎನ್ನಲಾಗಿದೆ.
ಹಾದಿಯಲ್ಲಿ ಸಿಲುಕಿಕೊಂಡಿದ್ದ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಏನಿದು ಮೋಕ್ಷ ಮಾರ್ಗಂ?
ತಿರುವಣ್ಣಾಮಲೈನ ಅರುಣಾಚಲ ಬೆಟ್ಟದ ಸುತ್ತಲಿನ ಗಿರಿವಲಂ ಯಾತ್ರೆಯ ಹಾದಿಯಲ್ಲಿ ಇಡುಕ್ಕು ಪಿಳ್ಳೈಯಾರ್ ದೇವಸ್ಥಾನವಿದೆ. ಈ ದೇವಸ್ಥಾನದ ಸಮೀಪ ಬಂಡೆಗಳ ನಡುವೆ ಗುಹೆಯಂತಿರುವ ಅತ್ಯಂತ ಕಿರಿದಾದ ಹಾದಿಯೇ ‘ಮೋಕ್ಷ ಮಾರ್ಗಂ’.
ಈ ಹಾದಿಯಲ್ಲಿ ತೆವಳಿಕೊಂಡು ಸಾಗಿದರೆ ಆಧ್ಯಾತ್ಮಿಕ ಲಾಭ ದೊರೆಯುತ್ತದೆ, ಜೀವನದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಕೆಲವು ಭಕ್ತರಲ್ಲಿದೆ. ಆದರೆ, ಹಾದಿಯ ಕಿರಿದಾದ ರಚನೆಯಿಂದಾಗಿ ಸಿಲುಕಿಕೊಳ್ಳುವ ಅಪಾಯವಿದ್ದು, ಇಂತಹ ಸಾಹಸಗಳು ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂಬ ಆತಂಕ ವ್ಯಕ್ತವಾಗಿದೆ.