ಚಂಡೀಗಢ (ಪಂಜಾಬ್): ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಬಾಕಿ ಇರುವಾಗಲೇ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷ (2027ರ ಆರಂಭದಲ್ಲಿ) ವಿಧಾನಸಭಾ ಚುನಾವಣೆ ನಡೆಯಲಿದ್ದು, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಿ ಚುನಾವಣೆಗೆ ಸಜ್ಜಾಗಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿರುವ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ಸಂಭವಿಸಿದೆ. ಆ ಕುರಿತ ವರದಿ ಇಲ್ಲಿದೆ:
ರಾಜೀನಾಮೆಗೆ ಹೈಕಮಾಂಡ್ ಸೂಚನೆ?
ನವಜೋತ್ ಸಿಂಗ್ ಸಿಧು ರಾಜೀನಾಮೆಯ ನಂತರ, 2022ರ ಏಪ್ರಿಲ್‌ನಲ್ಲಿ ರಾಜಾ ವಾರಿಂಗ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪಂಜಾಬ್ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಮುಂದುವರಿದಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಇದು ಉತ್ತುಂಗಕ್ಕೇರಿತ್ತು. ವಿಶೇಷವಾಗಿ ರಾಜಾ ವಾರಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಬಣಗಳ ನಡುವಿನ ಬಹಿರಂಗ ಶಕ್ತಿ ಪ್ರದರ್ಶನ ಹಾಗೂ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದವು. ಇದರೊಂದಿಗೆ, ಪಂಜಾಬ್ ಕಾಂಗ್ರೆಸ್‌ನ ನೂತನ ಉಸ್ತುವಾರಿ ಸಚಿನ್ ಪೈಲಟ್ ಅವರು ಇತ್ತೀಚೆಗೆ ರಾಜ್ಯದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿ ಹೈಕಮಾಂಡ್‌ಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಿರ್ಧರಿಸಿದ್ದು, ರಾಹುಲ್ ಗಾಂಧಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಬಳಿಕ ರಾಜಾ ವಾರಿಂಗ್ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ ಎನ್ನಲಾಗಿದೆ.
ಮುಂದಿನ ಅಧ್ಯಕ್ಷರು ಯಾರು?
ರಾಜಾ ವಾರಿಂಗ್ ಅವರ ರಾಜೀನಾಮೆ ಬೆನ್ನಲ್ಲೇ ಮುಂದಿನ 24 ರಿಂದ 48 ಗಂಟೆಗಳಲ್ಲಿ ಹೊಸ ಅಧ್ಯಕ್ಷರ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಮಾಜಿ ಸಚಿವ ಮತ್ತು ಹಿಂದೂ ಸಮುದಾಯದ ಪ್ರಮುಖ ನಾಯಕರಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ವಿಜಯ್ ಇಂದರ್ ಸಿಂಗ್ಲಾ ಅವರು ಸದ್ಯ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷ ಸ್ಥಾನದರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ಜಲಂಧರ್ ಕಂಟೋನ್ಮೆಂಟ್ ಶಾಸಕ ಪರ್ಗತ್ ಸಿಂಗ್ ಮತ್ತು ಗುರುದಾಸ್‌ಪುರ ಸಂಸದ ಸುಖ್‌ಜಿಂದರ್ ಸಿಂಗ್ ರಾಂಧವಾ ಅವರ ಹೆಸರುಗಳೂ ಕೂಡ ಕೇಳಿಬರುತ್ತಿವೆ.