ದೇಶ

ಡೆಹ್ರಾಡೂನ್ : ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸಲು MA ಕೋರ್ಸ್ ಗೆ ದಾಖಲಾದ ತಾಯಿ!

ಸ್ವತಂತ್ರ ಅಭ್ಯರ್ಥಿಯಾಗಿದ್ದ ಬೀನಾ ಅವರ ಮಗ ಭಾನು ಪ್ರತಾಪ್ ಚೌಹಾಣ್, ಮಂಗಳವಾರ ಕುಮಾವ್ನ್ ವಿಶ್ವವಿದ್ಯಾಲಯದ ಡಿಎಸ್‌ಬಿ (DSB) ಕ್ಯಾಂಪಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರು.

ಡೆಹ್ರಾಡೂನ್: ನೈನಿತಾಲ್‌ನ ಕಾಲೇಜೊಂದರಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮಗ ನಿರ್ಧರಿಸಿದಾಗ, ಕೇವಲ ಮನೆಯಿಂದಲೇ ಪ್ರೋತ್ಸಾಹ ನೀಡುವುದಕ್ಕೆ ಸೀಮಿತವಾಗಲಿಲ್ಲ. ಬದಲಾಗಿ, ಅವರು ಸ್ವತಃ ವಿದ್ಯಾರ್ಥಿನಿಯಾಗಿ ದಾಖಲಾತಿ ಪಡೆದು, ಮಗನ ಪ್ರಚಾರದಲ್ಲಿ ಪಾಲ್ಗೊಂಡು ಅವನ ಗೆಲುವಿಗೆ ನೆರವಾದರು.

ಸ್ವತಂತ್ರ ಅಭ್ಯರ್ಥಿಯಾಗಿದ್ದ ಬೀನಾ ಅವರ ಮಗ ಭಾನು ಪ್ರತಾಪ್ ಚೌಹಾಣ್, ಮಂಗಳವಾರ ಕುಮಾವ್ನ್ ವಿಶ್ವವಿದ್ಯಾಲಯದ ಡಿಎಸ್‌ಬಿ (DSB) ಕ್ಯಾಂಪಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದರು.

ಅವರು 1,355 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಹಾಗೂ ಎಬಿವಿಪಿ (ABVP) ಅಭ್ಯರ್ಥಿ ಶುಭಂ ಕುಮಾರ್ ಅವರನ್ನು 482 ಮತಗಳ ಅಂತರದಿಂದ ಸೋಲಿಸಿದರು. ಕುಮಾರ್ 873 ಮತಗಳನ್ನು ಪಡೆದಿದ್ದರು.

ಆದರೆ, ಕ್ಯಾಂಪಸ್‌ನಲ್ಲಿ ಬೀನಾ ಅವರು ಇದ್ದದ್ದು ಈ ಚುನಾವಣಾ ಕಣದಲ್ಲಿ ಹೆಚ್ಚು ಚರ್ಚಿತ ವಿಷಯವಾಯಿತು. ಹಲ್ದ್ವಾನಿ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿರುವ ಅವರು, ಡಿಎಸ್‌ಬಿ ಕ್ಯಾಂಪಸ್‌ನಲ್ಲಿ ಎಂ.ಎ. (ರಾಜ್ಯಶಾಸ್ತ್ರ) ಕೋರ್ಸ್‌ಗೆ ಪ್ರವೇಶ ಪಡೆದರು ಮತ್ತು ಮಗನ ಪರವಾಗಿ ಬೆಂಬಲ ಕ್ರೋಢೀಕರಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

ವಿದ್ಯಾರ್ಥಿಗಳನ್ನು ಸಂಪರ್ಕಿಸುವುದರಿಂದ ಹಿಡಿದು ಪ್ರಚಾರದ ತಂತ್ರವನ್ನು ರೂಪಿಸುವವರೆಗೆ, ಬೀನಾ ಚುನಾವಣೆಯುದ್ದಕ್ಕೂ ಭಾನು ಅವರೊಂದಿಗೆ ನಿಂತರು. ಮಂಗಳವಾರ ತಡರಾತ್ರಿ ಫಲಿತಾಂಶ ಪ್ರಕಟವಾಗುವ ಹೊತ್ತಿಗೆ, ಅವರ ಈ ಜಂಟಿ ಪ್ರಯತ್ನವು ಕ್ಯಾಂಪಸ್‌ನಾದ್ಯಂತ ಚರ್ಚೆಯ ವಿಷಯವಾಗಿತ್ತು.

ಫಲಿತಾಂಶದ ನಂತರ ಬೀನಾ, ನನ್ನ ಕಣ್ಣಲ್ಲಿ ಆನಂದಭಾಷ್ಪ ಬರುತ್ತಿದೆ ಎಂದು ಹೇಳಿದರು. ನನ್ನ ಮಗನನ್ನು ಹೊರಗಿನವನು ಎಂದು ಕರೆದವರಿಗೆ ಆತನ ಗೆಲುವು ಸೂಕ್ತ ಉತ್ತರ ನೀಡಿದೆ. ನಾವು ಹೊರಗಿನವರಲ್ಲ, ನಾವು ನೈನಿತಾಲ್‌ನವರು. ನಮಗೆ ಇಷ್ಟೊಂದು ಬೆಂಬಲ ನೀಡಿದ ನಗರಕ್ಕೆ ನಾನು ತುಂಬಾ ಸಂತೋಷದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಭಾನು ತಮ್ಮ ಗೆಲುವಿನ ಪ್ರಮಾಣಪತ್ರವನ್ನು ಸ್ವೀಕರಿಸುತ್ತಿದ್ದಂತೆ, ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಾ ಮತ್ತು ಹರ್ಷೋದ್ಗಾರದೊಂದಿಗೆ ಗೆಲುವನ್ನು ಸಂಭ್ರಮಿಸಿದರು. ಅವರಿಗೆ, ಈ ಫಲಿತಾಂಶವು ಕೇವಲ ವೈಯಕ್ತಿಕ ಸಾಧನೆಯಾಗಿರಲಿಲ್ಲ, ಬದಲಾಗಿ ಪ್ರಚಾರದ ಸಮಯದಲ್ಲಿ ತಾವು ಎತ್ತಿದ ವಿಷಯಗಳ ಕುರಿತು ಕಾರ್ಯನಿರ್ವಹಿಸುವ ಅವಕಾಶವೂ ಆಗಿತ್ತು.

ಈ ಗೆಲುವಿನ ಬಗ್ಗೆ ನನಗೆ ತುಂಬಾ ಸಂತೋಷವಿದೆ, ಆದರೆ ಡಿಎಸ್‌ಬಿ ಕ್ಯಾಂಪಸ್‌ಗಾಗಿ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ ಎಂದು ಅವರು ಹೇಳಿದರು. ನಾವು ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸಂಪೂರ್ಣ ಪ್ರಯತ್ನವನ್ನು ಮಾಡುತ್ತೇವೆ ಎಂದಿದ್ದಾರೆ.

ತೀವ್ರ ಕುತೂಹಲ ಕೆರಳಿಸಿದ್ದ ಈ ಕ್ಯಾಂಪಸ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಅವರ ಗೆಲುವು ವಿಶೇಷ ಗಮನ ಸೆಳೆಯಿತು. ಅದೇ ಸಮಯದಲ್ಲಿ, ಈ ಚುನಾವಣೆಯು ಬೀನಾ ಅವರನ್ನು ಮತ್ತೆ ತರಗತಿ ಕೊಠಡಿಗೆ ಕರೆತಂದಿತು. ಆದರೆ ಈ ಬಾರಿ ಅವರು ಬೆಂಬಲಿಸಬೇಕಾದ ಪ್ರಚಾರ ಕಾರ್ಯದೊಂದಿಗೆ ವಿದ್ಯಾರ್ಥಿನಿಯಾಗಿ ಅಲ್ಲಿಗೆ ಬಂದಿದ್ದರು.

ತನ್ನ ಮಗನಿಗೆ ಬೆಂಬಲವಾಗಿ ನಿಂತಿದ್ದಕ್ಕಾಗಿ ನೈನಿತಾಲ್ ಜನರಿಗೆ ಬೀನಾ ಧನ್ಯವಾದ ಅರ್ಪಿಸಿದರು. ಮಗ ಗಳಿಸಿದ ಮತಗಳಿಗಾಗಿ ಮಾತ್ರವಲ್ಲದೆ, ನಗರವು ತಮ್ಮ ಕುಟುಂಬಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ಅವರು ಹೆಮ್ಮೆ ವ್ಯಕ್ತಪಡಿಸಿದರು.

ಕ್ಯಾಂಪಸ್‌ನ ಇತರ ಫಲಿತಾಂಶಗಳಲ್ಲಿ, ಅನುಷ್ ಪುರಿ 1,614 ಮತಗಳೊಂದಿಗೆ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾದರು ಮತ್ತು ಸೃಷ್ಟಿ ರಾವತ್ ಖಜಾಂಚಿ ಹುದ್ದೆಯನ್ನು ಗೆದ್ದುಕೊಂಡರು. ಕುಂಕುಮ್ ಜೋಶಿ ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿ ಹಾಗೂ ಅಭಿಷೇಕ್ ರೈಕುನಿ ಪುರುಷರ ವಿಭಾಗದ ಉಪಾಧ್ಯಕ್ಷರಾಗಿ ಆಯ್ಕೆಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Flydubai ವಿಮಾನ ಹೈಜಾಕ್'ಗೆ ಯತ್ನ; ಕಾಕ್‌ಪಿಟ್‌ನಲ್ಲೇ ಡೆಡ್ಲಿ ಫೈಟ್; 174 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಸಾಹಸಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ..!

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಳ, ವಿಮಾನ ಇಂಧನವೂ ದುಬಾರಿ..!

ಕಾಂಗ್ರೆಸ್‌ನಲ್ಲಿ ಮತ್ತೆ ಸಂಪುಟ ಸರ್ಕಸ್: ದೆಹಲಿಯಲ್ಲಿ ವೇಣುಗೋಪಾಲ್ ಭೇಟಿಯಾದ ಸಿದ್ದರಾಮಯ್ಯ, ಖಾಲಿ ಇರೋ 2 ಸಚಿವ ಸ್ಥಾನ ಭರ್ತಿಗೆ ಪಟ್ಟು..!

ಡಿಕೆಶಿ ಕನಸಿನ ಅವಳಿ ಸುರಂಗ ಮಾರ್ಗಕ್ಕೆ ಹೊಸ ಕಂಟಕ: ಹೆಬ್ಬಾಳ ಕೆರೆಯ 3.45 ಎಕರೆ ಜೌಗು ಪ್ರದೇಶ ನಾಶಕ್ಕೆ ಯತ್ನ, ಎದುರಾಯ್ತು ಕಾನೂನು ಸಂಕಷ್ಟ..!

ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: ಬುಡಕಟ್ಟು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಹೆಸರೇ ಹೆಚ್ಚು ಡಿಲೀಟ್‌? SIR ವಿರುದ್ಧ ಸಿಡಿದೆದ್ದ ಒಕ್ಕೂಟ..!