ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿದ್ದ 6 ವರ್ಷದ ಮಗಳನ್ನು ತಾಯಿಯೇ ಕೆರೆಗೆ ಎಸೆದಿರುವ ವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್ ಸಾಗರ್ ಕೆರೆಯಲ್ಲಿ ಈ ವಿದ್ರಾವಕ ಘಟನೆ ನಡೆದಿದ್ದು, ತಾಯಿ ತನ್ನ ಆರು ವರ್ಷದ ಮಗಳನ್ನು ಹುಸೇನ್ ಸಾಗರ್ ಕೆರೆ ಎಸೆದಿದ್ದಾಳೆ. ಈ ವೇಳೆ ಇದನ್ನು ಗಮನಿಸಿದ ಆಟೋ ಚಾಲಕರೊಬ್ಬರು ತಕ್ಷಣ ಕಾರ್ಯಪ್ರವೃತ್ತರಾಗಿ ಹಗ್ಗದ ಸಹಾಯದಿಂದ ಬಾಲಕಿಯನ್ನು ರಕ್ಷಿಸಿದ್ದಾರೆ.
ಪ್ರಸ್ತುತ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ದೋಮಲ್ಗೂಡ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಾಲಕಿಯ ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪ್ಪರ್ ಟ್ಯಾಂಕ್‌ಬಂಡ್ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಳು. ಬಳಿಕ ಕಿರಿಯ ಮಗಳನ್ನು ಕೆರೆಗೆ ಎಸೆದು ಸ್ಥಳದಿಂದ ತೆರಳಿದ್ದಾಳೆ ಎಂದು ಆರೋಪಿಸಲಾಗಿದೆ.
ಹಗ್ಗದ ಸಹಾಯದಿಂದ ಬಾಲಕಿಯನ್ನು ರಕ್ಷಿಸಿದ ಆಟೋ ಚಾಲಕ
ಘಟನೆಯನ್ನು ಕಣ್ಣಾರೆ ಕಂಡ ಆಟೋ ಚಾಲಕ ತಕ್ಷಣ ಬಾಲಕಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಹಗ್ಗದ ಸಹಾಯದಿಂದ ಆಕೆಯನ್ನು ಕೆರೆಯಿಂದ ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ.
ನೀರು ನುಂಗಿದ್ದ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ತಕ್ಷಣವೇ ಆಟೋದಲ್ಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಬಾಲಕಿ ಪ್ರಜ್ಞೆ ಮರಳಿ ಪಡೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ
ಪ್ರಜ್ಞೆ ಮರಳಿದ ಬಳಿಕ ಬಾಲಕಿ ಪೊಲೀಸರಿಗೆ ತನ್ನ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದಾಳೆ. ತಾನು ಓಲ್ಡ್ ಬೋವೆನ್‌ಪಲ್ಲಿಯ ಹಸ್ಮತ್‌ಪೇಟೆ ಪ್ರದೇಶದ ನಿವಾಸಿ ಎಂದು ತಿಳಿಸಿದ್ದಾಳೆ. ಬಾಲಕಿಗೆ ಆರೋಗ್ಯ ಸಮಸ್ಯೆಯಿದ್ದು, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.
ಅಂತೆಯೇ ಈಕೆಯ ಚಿಕಿತ್ಸೆಗೆ ಕುಟುಂಬ ಹರಸಾಹಸ ಪಡುತ್ತಿತ್ತು. ಇತ್ತೀಚೆಗೆ ಶಸ್ತ್ರಚಿಕಿತ್ಸೆಯೂ ನಡೆದಿತ್ತು ಎನ್ನಲಾಗಿದೆ. ಆಕೆಯ ತಂದೆ ಮೃತಪಟ್ಟಿದ್ದು, ಒಬ್ಬ ಅಕ್ಕ ಇದ್ದಾಳೆ ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಆರ್ಥಿಕ ಸಂಕಷ್ಟವೇ ಕಾರಣವೇ?
ಬಾಲಕಿಯ ಆರೋಗ್ಯ ಸಮಸ್ಯೆ ಹಾಗೂ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ ತಾಯಿ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ, ಘಟನೆಯ ಹಿಂದಿನ ನಿಖರ ಕಾರಣ ಇನ್ನೂ ದೃಢಪಟ್ಟಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಾಲಕಿಯ ತಾಯಿಯ ನಡೆಗೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.