ನವದೆಹಲಿ: ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (DSGMC) ದೂರಿನ ಮೇರೆಗೆ, ಬಾಂಗ್ಲಾ ಸಾಹಿಬ್ ಗುರುದ್ವಾರದೊಳಗೆ ಪ್ರತಿಭಟನೆ ನಡೆಸಿದ ಮತ್ತು ಪಾವಿತ್ರ್ಯತೆಗೆ ಭಂಗ ತಂದ ಆರೋಪದ ಮೇಲೆ ದೆಹಲಿ ಪೊಲೀಸರು ಆಮ್ ಆದ್ಮಿ ಪಕ್ಷದ (AAP) ನಾಯಕರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಆಪ್‌ನ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಪಕ್ಷದ ಶಾಸಕರು, ಕಾರ್ಯಕರ್ತರು ಮತ್ತಿತರರನ್ನು ಹೆಸರಿಸಲಾಗಿದೆ. ಗುರುದ್ವಾರದೊಳಗೆ ಆಪ್‌ನ ಕೆಲವು ಬೆಂಬಲಿಗರು, ರಾಜಕೀಯವಾಗಿ ಪ್ರತಿಭಟನೆಯನ್ನು ನಡೆಸಿದ್ದು, ದಾರಿ ತಪ್ಪಿಸುವ ವೀಡಿಯೊಗಳನ್ನು ಹರಿಬಿಟ್ಟಿದ್ದಾರೆ ಎಂದು ಸಮಿತಿಯು ಆರೋಪಿಸಿದೆ.
ಆಪ್‌ನ ಕೆಲವು ಕಾರ್ಯಕರ್ತರು ಮತ್ತು ಬೆಂಬಲಿಗರು ಗುರುದ್ವಾರದ ಆವರಣಕ್ಕೆ ಪ್ರವೇಶಿಸಿ ಪ್ರತಿಭಟನೆ ನಡೆಸುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಅಲ್ಲದೇ ರಾಜಕೀಯ ಚಟುವಟಿಕೆಗಾಗಿ 'ಗುರು ಘರ್'ನ (ಗುರುದ್ವಾರದ) ಪಾವಿತ್ರ್ಯತೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಡಿಎಸ್‌ಜಿಎಂಸಿ (DSGMC) ತನ್ನ ದೂರಿನಲ್ಲಿ ಆರೋಪಿಸಿದೆ.
ಪ್ರತಿಭಟನೆ ವೇಳೆ ರಾಜಕೀಯ ಘೋಷಣೆಗಳನ್ನು ಕೂಗಲಾಯಿತು, ಇದರಿಂದ ಅಲ್ಲಿ ಪ್ರತಿಕೂಲ ಪರಿಣಾಮ ಉಂಟಾಯಿತು. ಗುರುದ್ವಾರವು ಒಂದು ಪವಿತ್ರ ಧಾರ್ಮಿಕ ಸ್ಥಳವಾಗಿದ್ದು, ಅದನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಬಾರದು ಎಂದು ಸಮಿತಿಯು ಪ್ರತಿಪಾದಿಸಿದೆ.
ಶಾಂತಿಯನ್ನು ಕಾಪಾಡಲು ಮತ್ತು ಆವರಣದ ಪಾವಿತ್ರ್ಯತೆಯನ್ನು ಉಳಿಸಲು ಗುರುದ್ವಾರದ ಆಡಳಿತ ಮಂಡಳಿ ಮತ್ತು ಸೇವಕರು ಮಧ್ಯಪ್ರವೇಶಿಸಿರುವುದಾಗಿ ಹೇಳಿದ್ದಾರೆ. ದೂರಿನೊಂದಿಗೆ ವೀಡಿಯೊಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳನ್ನು ಗುರುತಿಸುವಂತೆ ಕೋರಲಾಗಿದೆ ಎಂದು ಡಿಎಸ್‌ಜಿಎಂಸಿ ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನ್ ಕುಮಾರ್ ವಿರುದ್ಧ 'ಕಾಕ್ರೋಚ್ ಜನತಾ ಪಾರ್ಟಿ' ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶನಿವಾರ ಹಲವಾರು ಪ್ರತಿಭಟನಾಕಾರರು ಗುರುದ್ವಾರದ ಆವರಣದಲ್ಲಿ ಜಮಾಯಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ, ಎಎಪಿ (AAP) ನಾಯಕರು ಮತ್ತು ಶಾಸಕರು ವಿಷಯವನ್ನು ತಿರುಚಿ ತೋರಿಸುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಗುರುದ್ವಾರದ ಆಡಳಿತ ಮಂಡಳಿಯನ್ನೇ ದೂಷಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆಯೂ ಅದು ಆಗ್ರಹಿಸಿದೆ.