ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಮತ್ತು ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಹಾಲಿ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ವಾಕ್ಸಮರ ಜೋರಾಗಿದೆ. ಒಂದೆಡೆ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರೆ, ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ತಮಗೆ ಅನುಕೂಲ ಮಾಡಿಕೊಟ್ಟ ಮಾಜಿ ಮುಖ್ಯ ಚುನಾವಣಾ ಆಯುಕ್ತರಿಗೆ ರಾಜಕೀಯ ಹುದ್ದೆ ಹಾಗೂ ಪದ್ಮ ಪ್ರಶಸ್ತಿಗಳನ್ನು ನೀಡಿ ಬಹುಮಾನ ನೀಡಿ ಗೌರವಿಸಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪಗಳೇನು?
ಬಿಜೆಪಿ ನಾಯಕ ಪಿಯೂಷ್ ಗೋಯಲ್ ಅವರು ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದು,
ಗುಜರಾತ್ ರಾಜ್ಯಪಾರಾದ ಆರ್. ಕೆ. ತ್ರಿವೇದಿ: 1982 ರಿಂದ 1985 ರವರೆಗೆ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ ಆರ್. ಕೆ. ತ್ರಿವೇದಿ ಅವರು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ನಿವೃತ್ತರಾದ ಕೆಲವೇ ತಿಂಗಳುಗಳಲ್ಲಿ, ಅಂದರೆ 1986 ರಲ್ಲಿ ಅಂದಿನ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರನ್ನು ಗುಜರಾತ್ ರಾಜ್ಯದ ರಾಜ್ಯಪಾಲರನ್ನಾಗಿ ನೇಮಿಸಿತು.
ಟಿ. ಎನ್. ಶೇಷನ್ ಅವರಿಗೆ ಚುನಾವಣಾ ಟಿಕೆಟ್: ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಟಿ. ಎನ್. ಶೇಷನ್ ಅವರ ನಿಷ್ಪಕ್ಷಪಾತತೆಯನ್ನು ಕಾಂಗ್ರೆಸ್ ಶ್ಲಾಘಿಸುತ್ತಿತ್ತು. ಆದರೆ, ಅವರು ನಿವೃತ್ತರಾದ ಬಳಿಕ 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತು. ಇದು ಅವರಿಗೆ ನೀಡಿದ ಬಹುಮಾನವಲ್ಲವೇ ಎಂದು ಗೋಯಲ್ ಪ್ರಶ್ನಿಸಿದ್ದಾರೆ.
ಎಂ. ಎಸ್. ಗಿಲ್ ಅವರಿಗೆ ಸಚಿವ ಸ್ಥಾನ: 1996 ರಿಂದ 2001 ರವರೆಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎಂ. ಎಸ್. ಗಿಲ್ ಅವರಿಗೆ ಹುದ್ದೆಯಲ್ಲಿದ್ದಾಗಲೇ (2000ರಲ್ಲಿ) 'ಪದ್ಮ ವಿಭೂಷಣ' ಪ್ರಶಸ್ತಿ ನೀಡಲಾಗಿತ್ತು. ತದನಂತರ ಅವರು ನಿವೃತ್ತರಾದ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಕಾಂಗ್ರೆಸ್‌ನಿಂದ ರಾಜ್ಯಸಭಾ ಸಂಸದರಾದರು ಹಾಗೂ ಮನ್ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾದರು ಎಂಬುದನ್ನು ಪ್ರಮುಖವಾಗಿ ಆಕ್ಷೇಪಿಸಿದ್ದಾರೆ.
ನವೀನ್ ಚಾವ್ಲಾ ನೇಮಕಾತಿ ವಿವಾದ: 2009 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಅವರು "ಚಾವ್ಲಾ ಅವರು ತೀವ್ರ ಪಕ್ಷಪಾತ ಧೋರಣೆ ಹೊಂದಿದ್ದಾರೆ ಮತ್ತು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿ ಹುದ್ದೆಯಿಂದ ತೆಗೆದುಹಾಕುವಂತೆ ರಾಷ್ಟ್ರಪತಿಗಳಿಗೆ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎನ್. ಗೋಪಾಲಸ್ವಾಮಿ ಅವರು ಶಿಫಾರಸು ಮಾಡಿದ್ದರು. ಆದರೆ, ಅಂದಿನ ಸಿಇಸಿ ಶಿಫಾರಸನ್ನು ಬದಿಗೊತ್ತಿದ ಯುಪಿಎ ಸರ್ಕಾರ, ನವೀನ್ ಚಾವ್ಲಾ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಬಡ್ತಿ ನೀಡಿತು. ಚಾವ್ಲಾ ಅವರು ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು ಮತ್ತು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಿ ನಡೆದುಕೊಂಡಿದ್ದಕ್ಕೆ ಪ್ರತಿಯಾಗಿಯೇ ಅವರಿಗೆ ಆ ಮಹತ್ವದ ಹುದ್ದೆಯನ್ನು ನೀಡಲಾಗಿತ್ತು ಎಂದು ಮತ್ತೊಮ್ಮೆ ಗಂಭೀರವಾಗಿ ಟೀಕಿಸಿದೆ.
ಡಬಲ್ ಸ್ಟ್ಯಾಂಡರ್ಡ್ಸ್ ಕಾಂಗ್ರೆಸ್
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಲುವನ್ನು ಕಟುವಾಗಿ ಟೀಕಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಬಿಹಾರ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆದಾಗ ಸುಮ್ಮನಿದ್ದ ಕಾಂಗ್ರೆಸ್, ಈಗ ಮಾತ್ರ ಏಕೆ ಪ್ರಶ್ನಿಸುತ್ತಿದೆ ಎಂದು ಕೇಳಿದರು. ಜೊತೆಗೆ, ದೇಶದ ಚುನಾವಣಾ ವ್ಯವಸ್ಥೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯೇ ದೋಷಪೂರಿತವಾಗಿದೆ ಎಂದು ಕಾಂಗ್ರೆಸ್ ನಂಬುವುದಾದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ತಕ್ಷಣವೇ ರಾಜೀನಾಮೆ ನೀಡಬೇಕೆಂದು ಸವಾಲು ಹಾಕಿದರು.