ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿದ್ದು, ಈ ವೇಳೆ ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಚರ್ಚಿಸಿದರು ಮತ್ತು ಈ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಪುನಃಸ್ಥಾಪಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.
ಭಾರತ-ಇಸ್ರೇಲ್ ಸಂಬಂಧಗಳಲ್ಲಿನ ನಿರಂತರ ಆವೇಗವನ್ನು ಮೋದಿ ಮತ್ತು ನೆತನ್ಯಾಹು ಸ್ವಾಗತಿಸಿದರು ಮತ್ತು ಎರಡೂ ದೇಶಗಳ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಎಂದು ಪ್ರಧಾನಿ ಮೋದಿ ಕಚೇರಿ(ಪಿಎಂಒ) ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿಯಿಂದ ತಮಗೆ ಫೋನ್ ಕರೆ ಬಂದಿತ್ತು ಎಂದು ಹೇಳಿದ್ದಾರೆ.
"ನಮ್ಮ ದ್ವಿಪಕ್ಷೀಯ ಸಂಬಂಧಗಳಲ್ಲಿನ ನಿರಂತರ ಆವೇಗವನ್ನು ನಾವು ಪರಿಶೀಲಿಸಿದ್ದೇವೆ ಮತ್ತು ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ನಾವು ಚರ್ಚಿಸಿದ್ದೇವೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಪುನಃಸ್ಥಾಪಿಸುವ ತುರ್ತು ಅಗತ್ಯವನ್ನು ಒತ್ತಿಹೇಳಿದ್ದೇವೆ" ಎಂದು ಮೋದಿ ತಿಳಿಸಿದ್ದಾರೆ.
ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ಆಹ್ವಾನ
ಇದೇ ವೇಳೆ ನೆತನ್ಯಾಹು ಅವರು ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಇದೇ ಸಂದರ್ಭ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನೂ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಗೌರವಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ನೆತನ್ಯಾಹು, ಭಾರತದ ಪ್ರಧಾನಿ ಮೋದಿ ಅವರು ತಮ್ಮ ಆಹ್ವಾನಕ್ಕೆ ಧನ್ಯವಾದ ತಿಳಿಸಿರುವುದಾಗಿಯೂ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಇಸ್ರೇಲ್ ಭೂಮಿಯ ಮೇಲೂ, ವಾಯುಮಾರ್ಗದಲ್ಲೂ ಒಟ್ಟಾಗಿ ಹೋರಾಡುತ್ತಿವೆ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನನ್ನ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದೆ. ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಧೈರ್ಯಶಾಲಿ ಭಾರತೀಯ ಪೈಲಟ್ ಅವರೊಂದಿಗೆ ದೀಪ ಬೆಳಗಿಸುವ ಸಮಾರಂಭದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದೆ. ಮೋದಿ ಅವರು ಆಹ್ವಾನಕ್ಕೆ ಧನ್ಯವಾದ ತಿಳಿಸಿದರು ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.