ನವದೆಹಲಿ: ಬಿಕಾನೇರ್ ಹೌಸ್ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಕಲಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಭಾರಿ ರಾಜಕೀಯ ವಿವಾದ ಸೃಷ್ಟಿಯಾಗಿದೆ. ಅದರಲ್ಲೂ, ಈ ಇಡೀ ಪ್ರಸಂಗದ ಕುರಿತು ರಾಹುಲ್ ಗಾಂಧಿ ಅವರ ಮೌನವನ್ನು ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಕಲಹ ಹೆಚ್ಚಾಗಿದ್ದು, ಪ್ರಿಯಾಂಕಾ ಅವರ ಕುಟುಂಬವನ್ನು ರಾಜಕೀಯವಾಗಿ ಮುನ್ನೆಲೆಗೆ ಬರದಂತೆ ತಡೆಯುವ ಪಿತೂರಿಅಡಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ವಿಷುಯಲ್ ಆರ್ಟಿಸ್ಟ್ ಆಗಿರುವ ಕಾಂಗ್ರೆಸ್ ನಾಯಕಿ ಹಾಗೂ ವಯನಾಡ್ ಲೋಕಸಭಾ ಸದಸ್ಯೆಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ, ಬಿಕಾನೇರ್ ಹೌಸ್ನಲ್ಲಿ ನೋ ಐಡಿಯಾ ಇಸ್ ಫೈನಲ್ ಹೆಸರಿನ ವೈಯಕ್ತಿಕ ಫೋಟೋ ಪ್ರದರ್ಶನ ಹಮ್ಮಿಕೊಂಡಿದ್ದರು. ಆದರೆ, ಪ್ರದರ್ಶನ ಆರಂಭವಾಗಲು ಕೇವಲ ಕೆಲವು ಗಂಟೆಗಳಿರುವಾಗ ಬಂದ ಬಿಕಾನೇರ್ ಹೌಸ್ನ ಅಧಿಕಾರಿಗಳು, "ಬಿಕಾನೇರ್ ಹೌಸ್ ನಿಯಮಾವಳಿಗಳ ಪ್ರಕಾರ ಕೇವಲ ಸಂಸ್ಕೃತಿ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಕಲೆಗೆ ಮಾತ್ರ ಅವಕಾಶವಿದ್ದು, ರಾಜಕೀಯ ವಿಷಯಗಳನ್ನು ಪ್ರದರ್ಶಿಸುವಂತಿಲ್ಲ ಎಂದು ವಾದಿಸಿ", ರೈಹಾನ್ ಪ್ರದರ್ಶಿಸಲು ಇಟ್ಟಿದ್ದ 105 ಫೋಟೋಗಳ ಪೈಕಿ 70ಕ್ಕೂ ಹೆಚ್ಚು ಫೋಟೋಗಳನ್ನು ತೆಗೆದುಹಾಕುವಂತೆ ಸೂಚಿಸಿದರು. ಇವುಗಳಲ್ಲಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವ ಪ್ರತಿಭಟನೆಗಳು ಹಾಗೂ ರಾಷ್ಟ್ರಧ್ವಜ ಹೊಂದಿದ್ದ ಚಿತ್ರಗಳಿದ್ದವು. ಆದರೆ, ಇದನ್ನು ರೈಹಾನ್ ಮತ್ತು ಕಾಂಗ್ರೆಸ್ ನಾಯಕರು ಸೆನ್ಸಾರ್ಶಿಪ್ ಹಾಗೂ ಕಲಾ ಸ್ವಾತಂತ್ರ್ಯದ ಹರಣ ಎಂದು ಕರೆದರು.
ರಾಹುಲ್ v/s ಪ್ರಿಯಾಂಕಾ
ಈ ವಿವಾದದ ಬೆನ್ನಲ್ಲೇ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದರಂತೆ, ಕಾಂಗ್ರೆಸ್ ಪಕ್ಷದೊಳಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ಭಿನ್ನಾಭಿಪ್ರಾಯ ಮತ್ತು ಪೈಪೋಟಿ ತಾರಕಕ್ಕೇರಿದೆ ಎಂದು ಆರೋಪಿಸಿರುವ ಬಿಜೆಪಿ, ಪ್ರಸ್ತುತ ವಿಯೆಟ್ನಾಂ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಜಗತ್ತಿನ ಪ್ರತಿಯೊಂದು ವಿಷಯದ ಮೇಲೂ ಟ್ವೀಟ್ ಮಾಡುತ್ತಾರೆ. ಆದರೆ, ಸ್ವಂತ ಸೋದರಸಂಬಂಧಿ ರೈಹಾನ್ ವಾದ್ರಾ ಪರವಾಗಿ ಈವರೆಗೆ ಒಂದೇ ಒಂದು ಟ್ವೀಟ್ ಅಥವಾ ಹೇಳಿಕೆ ನೀಡಿಲ್ಲ. ಈ ಮೌನದ ಹಿಂದೆ ಪ್ರಿಯಾಂಕಾ ಅವರ ಕುಟುಂಬವನ್ನು ರಾಜಕೀಯವಾಗಿ ಮುನ್ನೆಲೆಗೆ ಬರದಂತೆ ತಡೆಯುವ ಪಿತೂರಿ ಅಡಗಿದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಪಾದಿಸಿದ್ದಾರೆ.
ರಾಹುಲ್ ಸೈಡ್ ಮಾಡಿ ರೈಹಾನ್ ಲಾಂಚ್ ಮಾಡಲು ಪ್ರಿಯಾಂಕ ಪ್ಲಾನ್?
ಮುಂದುವರೆದು, ರೈಹಾನ್ ವಾದ್ರಾ ಅವರ ಮೂಲ ಪ್ರಸ್ತಾವನೆಯಲ್ಲಿ ಪ್ರಕೃತಿ ಮತ್ತು ವನ್ಯಜೀವಿಗಳ ವಿಷಯಗಳಿದ್ದವು, ಆದರೆ ಕುಟುಂಬದ ಒತ್ತಡದಿಂದಾಗಿ ರಾಜಕೀಯ ಪ್ರತಿಭಟನೆಯ ಫೋಟೋಗಳನ್ನು ನಂತರ ಸೇರಿಸಲಾಯಿತು. ಅದರಲ್ಲೂ, ಪ್ರಿಯಾಂಕಾ ಗಾಂಧಿ ಅವರಿಗೆ ರಾಹುಲ್ ಗಾಂಧಿ ನಾಯಕತ್ವದ ಮೇಲೆ ಭರವಸೆ ಇಲ್ಲದಿರುವುದರಿಂದಲೇ, ಈ ವಿವಾದದ ನೆಪದಲ್ಲಿ ತಮ್ಮ ಮಗ ರೈಹಾನ್ನನ್ನು ರಾಜಕೀಯವಾಗಿ ಲಾಂಚ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಅದರಲ್ಲೂ, ಪ್ರತಿಯೊಂದಕ್ಕೂ ತಾವೇ ಸಂತ್ರಸ್ತರು ಎಂದು ಬಿಂಬಿಸಿಕೊಳ್ಳುವುದು ಗಾಂಧಿ ಕುಟುಂಬದ ಹಳೆಯ ಚಾಳಿ ಎಂದು ಬಿಜೆಪಿ ಟೀಕಿಸಿದೆ. ಈ ಮೂಲಕ ದೇಶದ ಸಾಮಾನ್ಯ ಜನರಿಗೆ ಅನ್ವಯಿಸುವ ನಿಯಮಗಳು ತಮಗೆ ಅನ್ವಯಿಸುವುದಿಲ್ಲ ಎಂದು ಈ ಕುಟುಂಬ ಭಾವಿಸಿದೆ ಎಂದು ದೂರಿದೆ.
ಮತ್ತೊಂದೆಡೆ, ಮಗನ ಬೆಂಬಲಕ್ಕೆ ನಿಂತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿ, "ಅಧಿಕಾರದಲ್ಲಿರುವವರು ಮತ್ತೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆದರಿದಾಗ, ಅವರು ತಾವು ರಕ್ಷಿಸಲು ಬಯಸುವ ಅಧಿಕಾರವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂದರ್ಥ. ದೇಶದಲ್ಲಿ ಯುವಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ" ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾರ್ತಿ ಚಿದಂಬರಂ ಮತ್ತು ಪವನ್ ಖೇರಾ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಕೂಡ ರೈಹಾನ್ ಪರವಾಗಿ ಧ್ವನಿ ಎತ್ತಿದ್ದಾರೆ.