ಸಂಗ್ರಹ ಚಿತ್ರ 
ದೇಶ

Microsoft ಉದ್ಯೋಗಿಗಳಿಗೆ ಬಿಗ್ ಶಾಕ್: ಭಾರತ ಸೇರಿ 4 ದೇಶಗಳ 60,000 ಟೆಕ್ಕಿಗಳಿಗೆ ಸ್ವಯಂ ನಿವೃತ್ತಿ ಪ್ಯಾಕೇಜ್ ಘೋಷಿಸಿದ ಮೈಕ್ರೋಸಾಫ್ಟ್, ಟೆಕ್ ಲೋಕದಲ್ಲಿ ಸಂಚಲನ..!

ಭಾರತದಲ್ಲಿ ಮೈಕ್ರೋಸಾಫ್ಟ್ ಸುಮಾರು 23 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಆದರೆ, ಈ ಯೋಜನೆಯಡಿ ದೇಶದಲ್ಲಿ ಎಷ್ಟು ಮಂದಿ ಅರ್ಹರಾಗಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಬೆಂಗಳೂರು: ಜಾಗತಿಕ ಐಟಿ ದಿಕ್ಸೂಚಿ ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಭಾರೀ ಶಾಕ್ ನೀಡಿದೆ. ಭಾರತ, ಅಮೆರಿಕ (US), ಬ್ರಿಟನ್ (UK) ಮತ್ತು ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 60,000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆ (Voluntary Exit Offer - VEO) ಯನ್ನು ಪ್ರಕಟಿಸಿದೆ. ಇದು ಕಂಪನಿಯ ಒಟ್ಟು ಜಾಗತಿಕ ಉದ್ಯೋಗಿಗಳಲ್ಲಿ ಸುಮಾರು ಶೇಕಡಾ 27 ರಷ್ಟಾಗಿದೆ.ಟ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಸೌಕರ್ಯಗಳಲ್ಲಿ ಮೈಕ್ರೋಸಾಫ್ಟ್ ಬಿಲಿಯನ್ ಡಾಲರ್‌ಗಳಷ್ಟು ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದ್ದು, ವೆಚ್ಚ ನಿರ್ವಹಣೆ ಮತ್ತು ಉದ್ಯೋಗಿಗಳನ್ನು ಮರುಹಂಚಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಮಿ ಕೋಲ್ಮನ್ ಆಂತರಿಕ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಕಂಪನಿಯಿಂದ ಹೊರಹೋಗಲು ನಿರ್ಧರಿಸುವ ಉದ್ಯೋಗಿಗಳಿಗೆ ಆರ್ಥಿಕ ನೆರವು ಹಾಗೂ ವೃತ್ತಿಜೀವನದ ಮುಂದಿನ ಹಂತಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುವುದಾಗಿ ಸಂಸ್ಥೆ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

ಭಾರತದಲ್ಲಿ ಮೈಕ್ರೋಸಾಫ್ಟ್ ಸುಮಾರು 23 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಆದರೆ, ಈ ಯೋಜನೆಯಡಿ ದೇಶದಲ್ಲಿ ಎಷ್ಟು ಮಂದಿ ಅರ್ಹರಾಗಿದ್ದಾರೆ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಜಾಗತಿಕವಾಗಿ ಸುಮಾರು 60 ಸಾವಿರ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ.

ಭಾರತದಲ್ಲಿನ ಅರ್ಹ ಉದ್ಯೋಗಿಗಳು ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕೇ ಎಂಬುದನ್ನು ನಿರ್ಧರಿಸಲು ಡಿಸೆಂಬರ್ 1ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಪ್ಯಾಕೇಜ್ ಸಾಮಾನ್ಯ ಸೇವಾ ಮುಕ್ತಾಯ ಪರಿಹಾರಕ್ಕೆ ಹೋಲಿಕೆಯಾಗಿದ್ದು, ಉದ್ಯೋಗಿಯು ಪೂರ್ಣಗೊಳಿಸಿದ ಪ್ರತಿ ಸೇವಾ ವರ್ಷಕ್ಕೆ ಒಂದು ತಿಂಗಳ ಮೂಲ ವೇತನ, ಆರೋಗ್ಯ ವಿಮೆ ಹಾಗೂ ವೃತ್ತಿ ಪರಿವರ್ತನೆಗೆ ಅಗತ್ಯವಾದ ನೆರವು ಒಳಗೊಂಡಿರುವುದಾಗಿ ತಿಳಿದುಬಂದಿದೆ.

ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹಾಗೂ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಮಿ ಕೋಲ್ಮನ್ ತಮ್ಮ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.

ನಾಲ್ಕು ದೇಶಗಳಲ್ಲಿನ ಆಯ್ದ ತಂಡಗಳಲ್ಲಿ 70ನೇ ಹಂತ ಅಥವಾ ಅದಕ್ಕಿಂತ ಕೆಳಗಿನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವ (ವಿಇಒ) ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಗಳ ಹುದ್ದೆ ಹಾಗೂ ಹಿರಿಯತೆಯನ್ನು ಆಧರಿಸಿ ಆಂತರಿಕ ಉದ್ಯೋಗ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ.

ಕಂಪನಿಯಿಂದ ಹೊರಗಿನ ಅವಕಾಶಗಳನ್ನು ಪರಿಗಣಿಸುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯ ಒದಗಿಸುವುದು ಈ ಸೀಮಿತ ಅವಧಿಯ ಯೋಜನೆಯ ಉದ್ದೇಶವಾಗಿದೆ ಎಂದು ಕೋಲ್ಮನ್ ಹೇಳಿದ್ದಾರೆ.

ಇದೇ ವೇಳೆ, ಭಾರತದಲ್ಲಿನ ಪ್ರತಿಭೆ ಹಾಗೂ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮುಂದುವರಿಸಿರುವುದಾಗಿ ಮೈಕ್ರೋಸಾಫ್ಟ್ ವಕ್ತಾರರು ತಿಳಿಸಿದ್ದಾರೆ.

2025ರಿಂದ 2029ರ ಅವಧಿಯಲ್ಲಿ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಹಾಗೂ ಕಾರ್ಯಾಚರಣೆಗಳಿಗಾಗಿ ಭಾರತದಲ್ಲಿ 20.5 ಶತಕೋಟಿ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ಕಂಪನಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

2030ರ ವೇಳೆಗೆ ಭಾರತದ ಎರಡು ಕೋಟಿ ಜನರಿಗೆ ಕೃತಕ ಬುದ್ಧಿಮತ್ತೆಯ ಕೌಶಲ್ಯಗಳನ್ನು ಕಲಿಸುವ ಗುರಿಯನ್ನೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಹಾದಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಯೋಜನೆಯು ಅರ್ಹ ಉದ್ಯೋಗಿಗಳಿಗೆ ಅಗತ್ಯ ನೆರವಿನೊಂದಿಗೆ ಕಂಪನಿಯಿಂದ ಹೊರಹೋಗುವ ಅವಕಾಶ ನೀಡಲಿದೆ. ಜೊತೆಗೆ, ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೊಂದಿಸಿಕೊಳ್ಳಲು ಆಯ್ದ ವಿಭಾಗಗಳಿಗೆ ಸಹಕಾರಿಯಾಗಲಿದೆ ಎಂದು ಕೋಲ್ಮನ್ ವಿವರಿಸಿದ್ದಾರೆ.

ಆದರೆ, ಕಂಪನಿಯ ಎಲ್ಲ ವಿಭಾಗಗಳಲ್ಲಿಯೂ ಈ ಯೋಜನೆಯನ್ನು ಒಂದೇ ರೀತಿಯಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ಸ್ಪಷ್ಟಪಡಿಸಿದೆ.

ಆಯಾ ವಿಭಾಗಗಳ ವ್ಯವಹಾರ ಆದ್ಯತೆಗಳು, ಗ್ರಾಹಕರಿಗೆ ನೀಡಿರುವ ಬದ್ಧತೆಗಳು ಹಾಗೂ ಉದ್ಯೋಗಿಗಳ ಅಗತ್ಯಗಳನ್ನು ಆಧರಿಸಿ ಯೋಜನೆಯ ಅನುಷ್ಠಾನ ನಿರ್ಧಾರವಾಗಲಿದೆ.

ಯೋಜನೆಗೆ ಅರ್ಹರಾಗಿರುವ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವದ ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುವ ಇ-ಮೇಲ್ ಕಳುಹಿಸಲಾಗುತ್ತದೆ ಎಂದು ಬ್ಲಾಗ್‌ನಲ್ಲಿ ತಿಳಿಸಲಾಗಿದೆ.

“ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವ ನಮಗೆ ಹೊಸದು. ಇದರಿಂದ ನಾವು ಕಲಿಯಲಿದ್ದೇವೆ,” ಎಂದು ಕೋಲ್ಮನ್ ಹೇಳಿದ್ದಾರೆ.

ಅಗತ್ಯವಿರುವ ಕಡೆಗಳಲ್ಲಿ ಉದ್ಯೋಗಿಗಳು ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗೂ ಕಂಪನಿಯೊಳಗಿನ ಇತರ ಉದ್ಯೋಗಾವಕಾಶಗಳನ್ನು ಅನ್ವೇಷಿಸಲು ಮೈಕ್ರೋಸಾಫ್ಟ್ ನೆರವು ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಂದು ತಂಡ ಅಥವಾ ಉದ್ಯೋಗಿಗೂ ಒಂದೇ ರೀತಿಯ ಪರಿಹಾರ ಸೂಕ್ತವಾಗುವುದಿಲ್ಲ. ಬದಲಾಗುತ್ತಿರುವ ವ್ಯವಹಾರ ಅಗತ್ಯಗಳನ್ನು ಪೂರೈಸುವ ಜತೆಗೆ ಉದ್ಯೋಗಿಗಳು ಬೆಳವಣಿಗೆ ಸಾಧಿಸಲು ಮತ್ತು ತಮ್ಮ ಕೊಡುಗೆ ನೀಡಲು ಅವಕಾಶ ಕಲ್ಪಿಸುವ ಸಮತೋಲನವನ್ನು ಕಾಯ್ದುಕೊಳ್ಳಲು ಕಂಪನಿ ಪ್ರಯತ್ನಿಸಲಿದೆ ಎಂದು ಕೋಲ್ಮನ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಬ್ಬು ಬೆಳೆಗಾರರ ಪ್ರತಿಭಟನೆ: 'ಸೌಹಾರ್ದಯುತ ಪರಿಹಾರ ಕಂಡುಕೊಳ್ಳೋಣ, ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ': CM DK ಶಿವಕುಮಾರ್

‘A’ ಸಿನಿಮಾ ನಿರ್ಮಾಪಕ ಸಿಲ್ಕ್ ಮಂಜು ನಿಧನ!

ಸಿಎಂ ಜತೆಗಿನ ಸಭೆ ವಿಫಲ, ಕಬ್ಬು ಬೆಳೆಗಾರರ ಹೋರಾಟ ಮುಂದುವರಿಕೆ; ಗಲಾಟೆ ಏಕೆ ಮಾಡ್ಕೊಂಡ್ರಿ: ಡಿಕೆಶಿ ಗರಂ

ಕಬ್ಬು ತೂಕದಲ್ಲೂ ಅಕ್ರಮ, ಸಕ್ಕರೆ MSP ಹೆಚ್ಚಳಕ್ಕೆ ಆಗ್ರಹ; ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಚರ್ಚೆ

20 ವರ್ಷ ಬಿಟ್ಟು ನಾನು ಅಧಿಕಾರಕ್ಕೆ ಬರ್ತೀನಿ: SC,ST OBC ಎಲ್ಲರಿಗೂ 2BHK ಮನೆ ಗ್ಯಾರಂಟಿ: ಪ್ರದೀಪ್ ಈಶ್ವರ್ ಶಪಥ