ನವದೆಹಲಿ: ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ನೋಂದಣಿ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕದಲ್ಲಿ ಆರ್ ಎಸ್ಎಸ್ ನ ಅಂಗಸಂಸ್ಥೆಯೊಂದು ನೋಂದಣಿ ಮಾಡಿಕೊಂಡಿದೆ.
ಹೌದು, ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕಕ್ಕೆ ಭೇಟಿ ನೀಡಿದ ಕೇವಲ ಎರಡು ದಿನಗಳಲ್ಲಿ, 'ಆರ್‌ಎಸ್‌ಎಸ್ ಫ್ರೆಂಡ್ಸ್' ಎಂದು ಕರೆದುಕೊಳ್ಳುವ ಒಂದು ಅಂಗಸಂಸ್ಥೆ ಅಮೆರಿಕದ ನ್ಯಾಯ ಇಲಾಖೆಯಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ ಎಂದು ಅಮೆರಿಕದ ವಿದೇಶಿ ಏಜೆಂಟ್‌ಗಳ ನೋಂದಣಿ ಕಾಯ್ದೆಯಡಿ ಸಲ್ಲಿಸಲಾದ ದಾಖಲೆಗಳು ಬಹಿರಂಗಪಡಿಸಿವೆ.
ಅಮೆರಿಕದಲ್ಲಿ RSSನ ಪ್ರಚಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಂಘದ ಹಿತೈಷಿ ಎಂದು ಹೇಳಿಕೊಂಡಿರುವ ಅಂಗಸಂಸ್ಥೆಯೊಂದು US ನ್ಯಾಯಂಗ ಇಲಾಖೆಯಲ್ಲಿ ವಿದೇಶಿ ಎಂಜೆಂಟ್ ವರ್ಗದ ಅಡಿಯಲ್ಲಿ ಆರ್‌ಎಸ್‌ಎಸ್ ಫ್ರೆಂಡ್ಸ್ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಕೊಂಡಿಕೊಂಡಿದೆ.
1938ರ ಅಮೆರಿಕಾದ ‘ವಿದೇಶಿ ಪ್ರತಿನಿಧಿಗಳ ನೋಂದಣಿ ಕಾಯಿದೆ’ಯ ಅಡಿಯಲ್ಲಿ, ಆ.27ರಂದು ನೋಂದಣಿ ಮಾಡಿಕೊಂಡಿರುವ ನೋಂದಣಿ ದಾಖಲೆಯಲ್ಲಿ ಜಾರ್ಜಿಯಾ ವಿಳಾಸವನ್ನು ಒದಗಿಸಿದ್ದು, ಇದರ ಜೊತೆಗೆ ದೆಹಲಿಯ ಕೇಶವ ಕುಂಜ್‌ನ ಪ್ರಧಾನ ಕಚೇರಿಯಲ್ಲಿರುವ RSSನ ವಿದೇಶಿ ಪ್ರಧಾನ ಸಂಸ್ಥೆಯ ವಿಳಾಸವನ್ನು ಸಹ ಉಲ್ಲೇಖಿಸಿದೆ.
ಈ RSS ಫ್ರೆಂಡ್ಸ್ ಸಂಘಟನೆಯ ನಿರ್ದೇಶಕರ ಮಂಡಳಿಯಲ್ಲಿ ರಾಜೇಂದ್ರ ಸೋನಾರಿಕರ್, ಜಯಂತ್ ಪಂತ್ ಮತ್ತು ದೇವಾನಂದ ಗಡ್ಡಮ್ ಎಂಬುವವರ ಹೆಸರನ್ನು ಪಟ್ಟಿಮಾಡಲಾಗಿದೆ.
ಭಾರತದ ಆರ್ ಎಸ್ಎಸ್ ಜೊತೆ ಕೇವಲ ಮೌಖಿಕ ಒಪ್ಪಂದವಿದೆಯೇ ಹೊರತು ಯಾವುದೇ ಲಿಖಿತ ಒಪ್ಪಂದವಿಲ್ಲ ಎಂದು RSS ಫ್ರೆಂಡ್ಸ್ ಸಂಘಟನೆ ಸ್ಪಷ್ಟಪಡಿಸಿದೆ.
ಈ ಕುರಿತು RSS ಫ್ರೆಂಡ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, "RSS ಫ್ರೆಂಡ್ಸ್ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಮೌಖಿಕ ಒಪ್ಪಂದವನ್ನು ಹೊಂದಿದೆಯೇ ಹೊರತು, ಯಾವುದೇ ರೀತಿಯ ಕಾರ್ಯಾಚರಣೆ ಸೂಚನೆಗಳನ್ನು ಒಳಗೊಂಡಿರುವ ಲಿಖಿತ ಉದ್ಯೋಗ, ಸಮಾಲೋಚನೆ, ಲಾಬಿ, ಸಾರ್ವಜನಿಕ ಸಂಪರ್ಕ ಅಥವಾ ಏಜೆನ್ಸಿ ಕುರಿತ ಒಪ್ಪಂದವನ್ನು ಹೊಂದಿಲ್ಲ ಎಂದು ಹೇಳಿದೆ.