ವಿಶ್ವಸಂಸ್ಥೆ: ಜಾಗತಿಕ ವ್ಯವಸ್ಥೆ ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಬಹುಪಕ್ಷೀಯ ವ್ಯವಸ್ಥೆ ತನ್ನ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕು ಹಾಗೂ ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಸುಧಾರಣೆ ತರಬೇಕು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಸೋಮವಾರ ನಡೆದ ‘ಪಾರ್ಟ್ನರ್ಸ್ ಫಾರ್ ಮಲ್ಟಿಲ್ಯಾಟರಲಿಸಂ, ಇಂಟರ್‌ನ್ಯಾಷನಲ್ ಲಾ, ಪೀಸ್ & ಪ್ರಾಸ್ಪೆರಿಟಿ’ (P4M) ಶೃಂಗಸಭೆಯ ಉದ್ಘಾಟನಾ ಸಭೆಗೆ ಜೈಶಂಕರ್ ಸಹ-ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಭಾರತದ ಪರವಾಗಿ ಮಾತನಾಡಿದ ಅವರು, ಜಾಗತಿಕ ನಿರ್ಧಾರ ಪ್ರಕ್ರಿಯೆಯನ್ನು ಹೆಚ್ಚು ಪಾಲ್ಗೊಳ್ಳುವಂತೆಯೂ ಪಾರದರ್ಶಕವಾಗಿಯೂ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಆಸ್ಟ್ರೇಲಿಯಾ, ಬಾರ್ಬಡೋಸ್, ಬ್ರೆಜಿಲ್, ಕೆನಡಾ, ಕೀನ್ಯಾ ಮತ್ತು ಯುರೋಪಿಯನ್ ಒಕ್ಕೂಟದೊಂದಿಗೆ ಭಾರತ ಈ ಶೃಂಗಸಭೆಯ ಸಹ-ಪ್ರಾಯೋಜಕ ರಾಷ್ಟ್ರವಾಗಿತ್ತು. ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಅಧಿವೇಶನದ ಹಿನ್ನೆಲೆಯಲ್ಲಿ ಈ ಸಭೆ ನಡೆಯಿತು.
“ಜಾಗತಿಕ ವ್ಯವಸ್ಥೆ ಒತ್ತಡದಲ್ಲಿರುವ ಸಂದರ್ಭದಲ್ಲಿ ನಾವು ಇಲ್ಲಿ ಸೇರಿದ್ದೇವೆ” ಎಂದು ಜೈಶಂಕರ್ ಹೇಳಿದರು. ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಸ್ಪರ್ಧೆ ಮತ್ತು ಸಂಘರ್ಷಗಳ ನಡುವೆ ಬಹುಪಕ್ಷೀಯ ವ್ಯವಸ್ಥೆ ತನ್ನ ಪ್ರಸ್ತುತತೆಯನ್ನು ಬಲವಾಗಿ ಪ್ರತಿಪಾದಿಸಬೇಕಿದೆ ಎಂದು ಅವರು ತಿಳಿಸಿದರು.
ಉದ್ವಿಗ್ನತೆ ಮತ್ತು ಸಂಘರ್ಷಗಳ ನಿಯಂತ್ರಿಸಲೇಬೇಕು
ಕಳೆದ ಹಲವು ದಶಕಗಳಲ್ಲಿ ಜಾಗತಿಕ ಶಕ್ತಿಸಮತೋಲನದಲ್ಲಿ ನಿರಂತರ ಬದಲಾವಣೆ ಕಂಡುಬಂದಿದೆ. ಆದರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಸಂಘರ್ಷಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ ಎಂದು ಜೈಶಂಕರ್ ಹೇಳಿದರು.
“ಇದನ್ನು ನಿಯಂತ್ರಿಸದೆ ಬಿಟ್ಟರೆ, ಅಂತಾರಾಷ್ಟ್ರೀಯ ಸಹಕಾರದ ಮೂಲ ಆಶಯವೇ ಪ್ರಶ್ನಾರ್ಹವಾಗಬಹುದು. ಹೀಗಾಗಿ ಸುಧಾರಿತ ಬಹುಪಕ್ಷೀಯ ವ್ಯವಸ್ಥೆ ಅತ್ಯಗತ್ಯ” ಎಂದು ಅವರು ಹೇಳಿದರು.
ಜಾಗತಿಕ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಅವಕಾಶ ಮತ್ತು ಹೆಚ್ಚಿನ ಪಾರದರ್ಶಕತೆ ಬಹಳ ಹಿಂದೆಯೇ ಅಗತ್ಯವಾಗಿತ್ತು ಎಂದು ಜೈಶಂಕರ್ ಪ್ರತಿಪಾದಿಸಿದರು. ಸಂಘರ್ಷಗಳು ಮತ್ತು ಜಾಗತಿಕ ಅಡೆತಡೆಗಳಿಂದ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆಯೂ ಅವರು ಗಮನ ಸೆಳೆದರು. ಇಂಧನ, ಆಹಾರ, ರಸಗೊಬ್ಬರ ಮತ್ತು ಹಣಕಾಸು ಕ್ಷೇತ್ರಗಳಲ್ಲಿನ ‘4F’ ಬಿಕ್ಕಟ್ಟನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದರು.
ಹೊಸ ತಂತ್ರಜ್ಞಾನಗಳಿಂದ ಎದುರಾಗಬಹುದಾದ ಅಪಾಯಗಳನ್ನು ನಿರ್ವಹಿಸಲು ಸೂಕ್ತ ಚೌಕಟ್ಟು ಮತ್ತು ಸುರಕ್ಷತಾ ಕ್ರಮಗಳನ್ನು ರೂಪಿಸಬೇಕು. ಪೂರೈಕೆ ಸರಪಳಿಗಳಲ್ಲಿ ಸಂಭವಿಸಬಹುದಾದ ಪ್ರಮುಖ ಅಡಚಣೆಗಳನ್ನು ಎದುರಿಸಲು ಅವುಗಳನ್ನು ವಿವಿಧ ಮೂಲಗಳಿಗೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಕಾನೂನು, ನಿಯಮಗಳು ಮತ್ತು ಮಾನದಂಡಗಳನ್ನು ಎಲ್ಲರೂ ನಿರಂತರವಾಗಿ ಪಾಲಿಸಿದಾಗ ಮಾತ್ರ ಬಹುಪಕ್ಷೀಯ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಲಿದೆ. ಶಾಂತಿ ಮತ್ತು ಅಂತಾರಾಷ್ಟ್ರೀಯ ಭದ್ರತೆ, ಹವಾಮಾನ ಕ್ರಮಗಳು, ಹೊಸ ತಂತ್ರಜ್ಞಾನಗಳು, ಅಭಿವೃದ್ಧಿ ಹಣಕಾಸು, ಭಯೋತ್ಪಾದನೆ ನಿಗ್ರಹ, ಪೂರೈಕೆ ಸರಪಳಿ, ವಿಪತ್ತು ನಿರ್ವಹಣೆ ಮತ್ತು ಸಾಂಕ್ರಾಮಿಕ ರೋಗಗಳ ಸಿದ್ಧತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರ ಅಗತ್ಯವಿದೆ ಎಂದು ಜೈಶಂಕರ್ ಹೇಳಿದರು.
ಜಾಗತಿಕ ನಾಯಕ ಅಭಿಮತ
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಶೃಂಗಸಭೆಯ ಸಹ-ಪ್ರಾಯೋಜಕರನ್ನು ಅಂತಾರಾಷ್ಟ್ರೀಯ ಸಮುದಾಯದ “ವ್ಯಾಪಕ ಮತ್ತು ವೈವಿಧ್ಯಮಯ” ಪ್ರತಿನಿಧಿತ್ವ ಎಂದು ಬಣ್ಣಿಸಿದರು. ಬಹುಪಕ್ಷೀಯ ವ್ಯವಸ್ಥೆ ಒತ್ತಡದಲ್ಲಿದೆ ಎಂದು ಅವರು ಹೇಳಿದರು.
ಕೀನ್ಯಾ ಅಧ್ಯಕ್ಷ ವಿಲಿಯಂ ರುಟೊ ಮಾತನಾಡಿ, ಬಹುಪಕ್ಷೀಯ ವ್ಯವಸ್ಥೆಯ ಬಿಕ್ಕಟ್ಟು ವಾಸ್ತವವಾಗಿ ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಬದಲಾಗಲು ವಿಫಲವಾಗಿರುವ ನಿಯಮಗಳು ಮತ್ತು ಸಂಸ್ಥೆಗಳ ಬಿಕ್ಕಟ್ಟೂ ಆಗಿದೆ ಎಂದು ಹೇಳಿದರು.
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್, ಸಂಘರ್ಷಗಳು, ಹಣದುಬ್ಬರ ಮತ್ತು ಹೊಸ ತಂತ್ರಜ್ಞಾನಗಳಿಂದ ಎದುರಾಗುತ್ತಿರುವ ಅಪಾಯ ಸೇರಿದಂತೆ ಜಾಗತಿಕ ಸವಾಲುಗಳನ್ನು ದೇಶಗಳು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಾರ್ಬಡೋಸ್ ಪ್ರಧಾನಿ ಮಿಯಾ ಮೋಟ್ಲಿ, ಬ್ರೆಜಿಲ್ ವಿದೇಶಾಂಗ ಸಚಿವ ಮೌರೊ ವಿಯೆರಾ ಹಾಗೂ ಕೆನಡಾದ ಶಾಶ್ವತ ಪ್ರತಿನಿಧಿ ಡೇವಿಡ್ ಲ್ಯಾಮೆಟ್ಟಿ ಕೂಡ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಪರವಾಗಿ ಲ್ಯಾಮೆಟ್ಟಿ ಹೇಳಿಕೆ ಓದಿದರು.
15 ಸದಸ್ಯರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಮುಖ ಜಾಗತಿಕ ಸಂಘರ್ಷಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಮುಂದುವರಿದಿರುವ ಸಂದರ್ಭದಲ್ಲೇ ಈ ಮೊದಲ P4M ಶೃಂಗಸಭೆ ನಡೆದಿದೆ. ವಿಶೇಷವಾಗಿ ವೀಟೊ ಅಧಿಕಾರ ಹೊಂದಿರುವ ಐದು ಶಾಶ್ವತ ಸದಸ್ಯ ರಾಷ್ಟ್ರಗಳಾದ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಮತ್ತು ಅಮೆರಿಕ ನಡುವೆ ಹಲವು ಪ್ರಮುಖ ಜಾಗತಿಕ ಸಂಘರ್ಷಗಳ ಕುರಿತು ಭಿನ್ನ ನಿಲುವುಗಳು ಮುಂದುವರಿದಿವೆ.