ಗ್ಯಾಂಗ್ಟಕ್: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಿಕ್ಕಿಂನ ಗ್ಯಾಲ್ಶಿಂಗ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, 30ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಇಲ್ಲಿನ ಯುಕ್ಸೋಮ್-ತಾಶಿಡಿಂಗ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಿಂಬಿ ಗ್ರಾಮದಲ್ಲಿ ಗುರುವಾರ (ಸೆ.24) ತಡರಾತ್ರಿ ಈ ಘಟನೆ ಸಂಭವಿಸಿದೆ.
ಸಮೀಪದ ಗುಡ್ಡದ ಒಂದು ಭಾಗ ದಿಢೀರ್ ಕುಸಿದಿದ್ದು, ಮೇಲಿನ ಗುಡ್ಡ ಪ್ರದೇಶಗಳಿಂದ ಅಪಾರ ಪ್ರಮಾಣದ ಮಣ್ಣು, ಬಂಡೆಗಳು ಹಾಗೂ ಅವಶೇಷಗಳು ಕುಸಿದು ಬಂದ ಪರಿಣಾಮ ಹಲವು ಮನೆಗಳು ಹಾನಿಗೊಳಗಾಗಿವೆ.
ಸರ್ಕಾರಿ ವಸತಿ ಕಟ್ಟಡಗಳೂ ಭೂಕುಸಿತಕ್ಕೆ ಸಿಲುಕಿದ್ದು, ಕೆಲವು ಮನೆಗಳು ಸಂಪೂರ್ಣವಾಗಿ ಧ್ವಂಸವಾಗಿದ್ದರೆ, ಇನ್ನು ಕೆಲವು ಮನೆಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಹಾನಿ ವರದಿಯಾಗಿಲ್ಲ, ಕ್ರಮ ಕೈಗೊಳ್ಳಲಾಗಿದೆ ಎಂದ ಸಿಎಂ
ಆದರೆ, ಸದ್ಯದವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಭೂಕುಸಿತದಿಂದ ಉಂಟಾದ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತ ನಿವಾಸಿಗಳ ಸುರಕ್ಷತೆ ಮತ್ತು ಕಲ್ಯಾಣ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಅಧಿಕಾರಿಗಳು ಹೈ ಅಲರ್ಟ್‌ನಲ್ಲಿ ಇರುವಂತೆ, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಹಾಗೂ ನಿವಾಸಿಗಳ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ತೀವ್ರ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪೀಡಿತ ಪ್ರದೇಶದ ಜನರು ಎಚ್ಚರಿಕೆಯಿಂದ ಇರುವಂತೆ ಸಿಎಂ ಮನವಿ ಮಾಡಿದ್ದಾರೆ. ಅಧಿಕಾರಿಗಳು ನೀಡುವ ಮುನ್ನೆಚ್ಚರಿಕೆ ಸೂಚನೆಗಳನ್ನು ಪಾಲಿಸುವಂತೆ ಹಾಗೂ ಸಂಕಷ್ಟದಲ್ಲಿರುವವರಿಗೆ ಪರಸ್ಪರ ಸಹಕಾರ ನೀಡುವಂತೆ ಅವರು ಕರೆ ನೀಡಿದ್ದಾರೆ.
ರಿಂಬಿ ಗ್ರಾಮದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಜನರ ಸುರಕ್ಷತೆ ಖಚಿತಪಡಿಸಲು ರಾಜ್ಯ ಸರ್ಕಾರ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತಿಳಿಸಿದ್ದಾರೆ.
ಜನರ ಸುರಕ್ಷತೆಯೇ ಮೊದಲ ಆದ್ಯತೆ
ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ತಮಂಗ್, ಪರಿಸ್ಥಿತಿ ಗಂಭೀರವಾಗಿದ್ದು, ಜನರ ಸುರಕ್ಷತೆ ಮತ್ತು ಕಲ್ಯಾಣವೇ ಸರ್ಕಾರದ ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಸಂಕಷ್ಟದ ಸಂದರ್ಭದಲ್ಲಿ ರಿಂಬಿ ಜನರೊಂದಿಗೆ ಸರ್ಕಾರ ದೃಢವಾಗಿ ನಿಂತಿದೆ. ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಅಲ್ಲದೆ ರಿಂಬಿ ನಿವಾಸಿಗಳು ಎದುರಿಸುತ್ತಿರುವ ಸಂಕಷ್ಟ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ಆರಂಭದಿಂದಲೂ ಸಮಸ್ಯೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪೀಡಿತ ಪ್ರತಿಯೊಂದು ಕುಟುಂಬದ ಬಗ್ಗೆಯೂ ನನ್ನ ಚಿಂತನೆ ಮತ್ತು ಪ್ರಾರ್ಥನೆ ಇದೆ ಎಂದು ತಮಾಂಗ್ ಹೇಳಿದ್ದಾರೆ.
ಮುಂದುವರಿದ ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಸಿಎಂ ಮನವಿ ಮಾಡಿದ್ದು, ಅಧಿಕಾರಿಗಳು ನೀಡುವ ಮುನ್ನೆಚ್ಚರಿಕೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಅಗತ್ಯವಿರುವ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡುವಂತೆ ಅವರು ಕರೆ ನೀಡಿದ್ದಾರೆ. ರಿಂಬಿಯ ಪರಿಸ್ಥಿತಿಯನ್ನು ಸರ್ಕಾರ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಜನರ ರಕ್ಷಣೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಭರವಸೆ ನೀಡಿದ್ದಾರೆ.