ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ `ಇಂದ್ರ ಧನುಷ್' ಯೋಜನೆಯನ್ನು ಮಾರ್ಚ್ ನಲ್ಲಿ ಜಾರಿಗೆ ತರಲಾಗುವುದು ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಪಾಲು (50:50) ಭರಿಸಲಿವೆ. ಚಿಕ್ಕ ಮಕ್ಕಳನ್ನು ಕಾಡುವ ಏಳು ರೋಗಗಳಿಗೆ ಉಚಿತ ಔಷಧ, ವಿಟಮಿನ್ ಎ ನೀಡುವ ಕಾರ್ಯ ಕ್ರಮ ಇದು. ಹೈದರಾಬಾದ್ ಕರ್ನಾಟಕದ ೫ ಜಿಲ್ಲೆ ಹಾಗೂ ಪಾಲಿಕೆಗಳ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗುವುದು. ಮುಂದಿನ 4 ತಿಂಗಳಲ್ಲಿ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು. ರಾಜ್ಯದಲ್ಲಿ ಎಚ್ 1ಎನ್1 ಗೆ ಇದುವರೆಗೆ 33 ಮಂದಿ ಮೃತಪಟ್ಟಿದ್ದಾರೆ. 603 ಮಂದಿಯಲ್ಲಿ ರೋಗಪತ್ತೆಯಾಗಿದೆ ಎಂದರು.
ಸಚಿವರ ಮಾನವೀಯತೆ: ಆಟೋ ಡಿಕ್ಕಿಯಾಗಿ ಗಾಯಗೊಂಡು ನರಳುತ್ತಿದ್ದ ವ್ಯಕ್ತಿಯನ್ನು ಸಚಿವ ಯು.ಟಿ. ಖಾದರ್ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು. ಲೇಡಿಗೋಷನ್ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೊರಟಾಗ ಪುರಭವನ ಎದುರು ರಿಕ್ಷಾ ಡಿಕ್ಕಿಯಾಗಿ ವ್ಯಕ್ತಿ ಗಾಯಗೊಂಡು ಚಡಪಡಿಸುತ್ತಿದ್ದರು. ಅಲ್ಲಿ ಜನರು ಗುಂಪು ಸೇರಿ ನೋಡುತ್ತಿದ್ದರೇ ವಿನಾ ಆಸ್ಪತ್ರೆಗೆ ಸಾಗಿಸಲು ಮುಂದಾಗುತ್ತಿಲ್ಲ. ಆ ದಾರಿಯಲ್ಲಿ ಬಂದ ಸಚಿವ ಖಾದರ್ ಗಾಯಾಳುವನ್ನು ತಮ್ಮ ಕಾರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.