ಬೆಂಗಳೂರು: ಕಾವೇರಿ ವಿಚಾರವಾಗಿ ಕಳೆದ ಸೋಮವಾರ ರಾಜ್ಯಾದ್ಯಂತ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತ್ತು. ಬೆಂಗಳೂರಂತು ಅಕ್ಷರಶಃ ಬೆಂಕಿಯ ಕೆನ್ನಾಲಿಗೆಗೆ ನಲುಗಿತ್ತು. ಈ ಗಲಾಟೆಯಿಂದೆ ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಕೈವಾಡವಿರುವ ಅನುಮಾನವಿದೆ ಎಂದು ರಾಜ್ಯ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ್ ಅವರು, ಕಾವೇರಿ ಕಿಚ್ಚು ಬೆಂಗಳೂರಿನಲ್ಲಿ ಹಿಂಸಾಚಾರ ರೂಪ ಪಡೆದಿದ್ದು, ಇದರ ಹಿಂದೆ ಆರ್ಎಸ್ಎಸ್ ಕೈವಾಡವಿರುವ ಶಂಕೆ ಇದ್ದು ಇದಕ್ಕಾಗಿ ಪ್ರತ್ಯೇಕ ತನಿಖೆ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಪ್ರತಿಭಟನೆ ಕಾವು ಹಿಂಸಾಚಾರ ರೂಪ ಪಡೆದಿದ್ದು, ಪ್ರತಿಭಟನಾಕಾರು ಸುಮಾರು 70 ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಇನ್ನು ಉದ್ರಿಕ್ತರನ್ನು ಚದುರಿಸಲು ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಲಾಠಿ ಚಾರ್ಚ್ ವೇಳೆ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.