ಬೆಳಗಾವಿಗೆ ಆಗಮಿಸಿದ ಕೆ,ಸಿ ವೇಣುಗೋಪಾಲ್
ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಮನೆಮನೆಗೆ ಕಾಂಗ್ರೆಸ್ ಅಭಿಯಾನದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣು ಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಆದರೆ ಬೆಂಗಳೂರಿನಲ್ಲಿ ಈ ಅಭಿಯಾನಕ್ಕೆ ಶಾಸಕರ ನೀರಸ ಪ್ರತಿಕ್ರಿಯೆಗೆ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಪಾಲ್ಗೊಂಡ ಕಾರ್ಯಕರ್ತರ ಬಗ್ಗೆ ತೀವ್ರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಧರ್ಮನಾಥ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಅಭಿಯಾನ ಸಹಾಯವಾಗಲಿದೆ, ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷ ಕುಟುಂಬಗಳಿದ್ದು, ಎರಡೂವರೆ ಲಕ್ಷ ಮಂದಿ ಕಾರ್ಯಕರ್ತರು ಭೇಟಿಯಾಗಿರುವುದು ಯಶಸ್ಸನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಕಾರ್ಯಕ್ರಮ ಹಾಗೂ ಯೋಜನೆಗಳ ಬಗ್ಗೆ ಜಿಲ್ಲೆಯಲ್ಲಿರುವ ಕುಟುಂಬಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ, ಅನ್ನಭಾಗ್ಯ ಮತ್ತು ಕ್ಷೀರಭಾಗ್ಯಯೋಜನೆಗಳಿಂದ ಜನರಿಗೆ ಸಂತಸವಾಗಿದೆ, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಂತೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದರೇ, ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇನ್ನೂ ಕೇಂದ್ರ ಎನ್ ಡಿ ಎ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ವೇಣುಗೋಪಾಲ್, ಜಿಎಸ್ ಟಿ ಹೆಸರಲ್ಲಿ ಮಧ್ಯಮ ವರ್ಗದ ಜನರನ್ನು ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಈ ಮೊದಲು ಬಿಜೆಪಿ ನಾಯಕರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಾಗಿ ಹೇಳುತ್ತಿದ್ದರು. ಆದರೆಯ ಯಾವುದೇ ಕಾರಣಕ್ಕೂ ತಾವು ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬುದು ಈಗ ಕಮಲ ಪಕ್ಷದ ಮುಖಂಡರಿಗೆ ವಾಸ್ತವದ ಅರಿವಾಗಿದೆ ಎಂದು ಟೀಕಿಸಿದರು, ಇನ್ನು ರಾಜ್ಯ ಸರ್ಕಾರ 80 ಸಾವಿ ಕೋಟಿ ರು. ರೈತರ ಸಾಲಮನ್ನಾ ಮಾಡಿದೆ ಎಂದು ಹೇಳಿದ್ದಾರೆ.