ರಾಜಕೀಯ

ರಾಜ್ಯಸಭೆ ಚುನಾವಣೆ: ಕುದುರೆ ವ್ಯಾಪಾರ ಶಂಕೆ, ಶಾಸಕರ ಮೇಲೆ ಚುನಾವಣಾ ಆಯೋಗದ ಕಣ್ಣು

Srinivasamurthy VN
ಬೆಂಗಳೂರು: ರಾಜ್ಯ ಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಶಾಸಕರ ಓಲೈಕೆಗಾಗಿ ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸುವ ಶಂಕೆ ಮೇರೆಗೆ ಚುನಾವಣಾ ಆಯೋಗ ಶಾಸಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ಈ ಬಗ್ಗೆ ದೈನಿಕವೊಂದು ವರದಿ ಮಾಡಿದ್ದು, ರಾಜ್ಯ ವಿಧಾನಸಭೆಯಿಂದ ಇದೇ ಮಾರ್ಚ್ 23 ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಆಯೋಗ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ. ಶಾಸಕರ ಕುದುರೆ ವ್ಯಾಪಾರ ತಡೆಯುವ ನಿಟ್ಟಿನಲ್ಲಿ ಶಾಸಕರ ಚಲನ-ವಲನದ ಮೇಲೆ ಆದಾಯ ತೆರಿಗೆ ಇಲಾಖೆ, ಚುನಾವಣಾ ಆಯೋಗ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳು ಹದ್ದಿನ ಕಣ್ಣಿಟ್ಟಿವೆ ಎನ್ನಲಾಗಿದೆ.
ನಾಲ್ಕು ರಾಜ್ಯಸಭೆಯ ಸ್ಥಾನಗಳಿಗಾಗಿ ಐವರು ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಸಹಜವಾಗಿಯೇ ರಾಜ್ಯಸಭಾ ಚುನಾವಣಾ ಕಣ ರಂಗೇರಿದೆ. ಹೀಗಾಗಿ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ನಾಲ್ಕೂ ಸಂಸ್ಥೆಗಳು, ಶಾಸಕರ ಮೇಲೆ ನಿಗಾ ವಹಿಸಿವೆ. ವಿಧಾನಸಭೆಯ ಸಂಖ್ಯೆಯ ಆಧಾರದ ಮೇಲೆ ಕಾಂಗ್ರೆಸ್ – 2, ಬಿಜೆಪಿ – 1 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಅವಕಾಶವಿದೆ. ನಾಲ್ಕನೇ ಸ್ಥಾನಕ್ಕಾಗಿ ಕಾಂಗ್ರೆಸ್‌ ನ ಮೂರನೇ ಅಭ್ಯರ್ಥಿ ಜಿ.ಸಿ. ಚಂದ್ರಶೇಖರ್ ಹಾಗೂ ಜೆಡಿಎಸ್ ಅಭ್ಯರ್ಥಿ ಬಿ.ಎಂ. ಫಾರೂಕ್ ವಿರುದ್ಧ ತೀವ್ರ ಪೈಪೋಟಿ ಎದುರಾಗಿದೆ. 
ನಾಲ್ಕನೇ ಸ್ಥಾನದ ಗೆಲುವಿಗಾಗಿ ಈ ಅಭ್ಯರ್ಥಿಗಳು, ಶಾಸಕರ ಓಲೈಕೆಗಾಗಿ ಹಣದ ಹೊಳೆ ಹರಿಸುವ ಹಿನ್ನೆಲೆಯಲ್ಲಿ ಇಂತಹದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
SCROLL FOR NEXT