ಅಲ್ಪಾವಧಿ 'ಸಿಎಂ ಬಿಎಸ್ ವೈ': ಪ್ರಮಾಣವಚನ ಸ್ವೀಕಾರದಿಂದ ರಾಜಿನಾಮೆವರೆಗೂ!
ಬಹುಮತ ಸಾಬೀತುಪಡಿಸುವ ಕಸರತ್ತನ್ನು ನಂಬಿಕೊಂಡೇ 3ನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 55 ಗಂಟೆಗಳಲ್ಲೇ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ...
ಬೆಂಗಳೂರು; ಬಹುಮತ ಸಾಬೀತುಪಡಿಸುವ ಕಸರತ್ತನ್ನು ನಂಬಿಕೊಂಡೇ 3ನೇ ಬಾರಿ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 55 ಗಂಟೆಗಳಲ್ಲೇ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಈ ಮೂಲಕ ಯಡಿಯೂರಪ್ಪ ಅವರು ಒಟ್ಟು 3 ಬಾರಿ ಮುಖ್ಯಮಂತ್ರಿಯಾದರೂ ಎರಡು ಬಾರಿ ಅತ್ಯಲ್ಪ ಅವಧಿಯಲ್ಲಿಯೇ ಸ್ಥಾನ ತ್ಯಜಿಸಿದಂತಾಗಿದೆ. ಒಂದು ಬಾರಿಯೂ ಪೂರ್ಣ ಅವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ.
ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ವೇಳೆಯ ಕೊನೆಯ ಹಂತದಲ್ಲಿ ಯಡಿಯೂರಪ್ಪ ಅವರು ವಿಶ್ವಾಸಮತ ಕೋರುವ ಪ್ರಸ್ತಾವವನ್ನು ಮತ ಹಾಕುವ ಮೊದಲೇ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಪ್ರಕಟಿಸುವ ಮೂಲಕ ಸೋಲನ್ನು ಒಪ್ಪಿಕೊಳ್ಳುವ ನಿರ್ಧಾರಕ್ಕೆ ಬಂದರು.
ರಾಜೀನಾಮೆ ನೀಡುವುದಕ್ಕೂ ಮುನ್ನ ಯಡಿಯೂರಪ್ಪ ಅವರು ಸದನದಲ್ಲಿ ಸುದೀರ್ಘ ವಿದಾಯ ಭಾಷಣೆ ಮಾಡುವ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಡೆಯನ್ನು ಕಟುವಾಗಿ ಟೀಕಿಸಿದರು. ನಂತರ ಪ್ರಸ್ತಾವವನ್ನು ಮತಕ್ಕೆ ಹಾಕಿದಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಸೋಲಾಗುವುದು ಖಚಿತ ಎಂಬುದು ಸ್ಪಷ್ಟವಾದ ಹಿನ್ನಲೆಯಲ್ಲಿ ರಾಜೀನಾಮೆ ನೀಡುವುದೇ ಸೂಕ್ತ ನಿರ್ಧಾರಕ್ಕೆ ಬಂದರು.
ನಂತರ ವಿಧಾನಸೌಧದಿಂದ ನೇರವಾಗಿ ಪಕ್ಷದ ಹಿರಿಯ ಮುಖಂಡರೊಂದಿಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿವಾಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು. ಅಲ್ಲಿಗೆ ಫಲಿತಾಂಶ ಪ್ರಕಟಗೊಂಡ ಬಳಿಕ ಕಳೆದ 5 ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆದಿದ್ದ ಹೈಡ್ರಾಮಾಕ್ಕೆ ತೆರೆಬಿದ್ದಂತಾಯಿತು.
ಶನಿವಾರ ಸಂಜೆ ವಿಜಯೋತ್ಸವ ಆಚರಿಸುವಂತೆ ಶುಕ್ರವಾರ ಸಂಜೆ ಪಕ್ಷದ ಕಾರ್ಯಕರ್ತರಿಗೆ ಬಹಿರಂಗವಾಗಿಯೇ ಕರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದ ಯಡಿಯೂರಪ್ಪ ಅವರ ನಡೆ ಸಹಜವಾಗಿಯೇ ಕುತೂಹಲ ಮೂಡಿಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ನೇರವಾಗಿ ಅಥವಾ ಪರೋಕ್ಷವಾಗಿ ಬಿಜೆಪಿಯನ್ನು ಬೆಂಬಲಿಸಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಅಂತಿಮವಾಗಿ ಯಡಿಯೂರಪ್ಪ ಅವರ ಲೆಕ್ಕಾಚಾರ ತಪ್ಪಾಯಿತು.
ಕಳೆದ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟಗೊಂಡ ದಿನವೇ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳು ಪ್ರತ್ಯೇಕವಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದವು. ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಹಿನ್ನಲೆಯಲ್ಲಿ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚನೆಯ ಆಹ್ವಾನ ನೀಡಿದರು.
ಜೊತೆಗೆ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶವನ್ನೂ ನೀಡಿದ್ದರು. ಆ ಪ್ರಕಾರ ಯಡಿಯೂರಪ್ಪ ಅವರು ಗುರುವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. ಆದರೆ, ರಾಜ್ಯಪಾಲರ ಈ ನಿರ್ಧಾರ ವಿರೋಧಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದಾಗಿ ಯಡಿಯೂರಪ್ಪ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಶನಿವಾರ ಸಂಜೆಯ ಗಡುವು ನೀಡಲಾಯಿತು. ಹೀಗಾಗಿ ಶನಿವಾರ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ಚಿನಾಯಿತರಾದ ನೂತನ ಪ್ರತಿನಿಧಿಗಳಿಗೆ ಪ್ರಮಾಣವಚನ ಬೋಧಿಸಿದ ನಂತರ ವಿಶ್ವಾಸಮತ ಪ್ರಸ್ತಾವ ಮಂಡಿಸಲಾಯಿತು.
ಈ ನಡುವೆ ಬಿಜೆಪಿ ಪಾಳೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಯಿತು. ಆದರೆ, ಇದರ ಮುನ್ಸೂಚನೆ ಅರಿತಿದ್ದ ಉಭಯ ಪಕ್ಷಗಳ ನಾಯಕರು ತಮ್ಮ ಶಾಸಕರನ್ನು ರೆಸಾರ್ಟ್ ನಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡರು. ಜೊತೆಗೆ ಬಿಜೆಪಿಯ ಆಮಿಷಕ್ಕೆ ಬಲಿಯಾಗದಂತೆ ಬಹಳ ಎಚ್ಚರಿಕೆ ವಹಿಸಿ, ಮನವೊಲಿಕೆ ಪ್ರಯತ್ನ ನಡೆಸಿದ್ದರು. ಅಂತಿಮವಾಗಿ ಅದರಲ್ಲಿ ಯಶಸ್ವಿಯಾಗಿದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ತಮ್ಮತ್ತ ಸೆಳೆಯುವ ಬಿಜೆಪಿ ಪ್ರಯತ್ನ ಸಫಲವಾಗಲಿಲ್ಲ. ಅದರ ಪರಿಣಾಣವೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು.
ಈ ಹಿಂದೆ 2007ರ ನ.12ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಯಡಿಯೂರಪ್ಪ ಅವರು 7 ದಿನಗಳ ಅತ್ಯಲ್ಪ ಅವಧಿಯಲ್ಲಿಯೇ ವಿಶ್ವಾಸಮತದಲ್ಲಿ ಸೋಲುಂಟಾಗಿ ಸ್ಥಾನ ತ್ಯಜಿಸಿದ್ದರು. ಆಗ ಜೆಡಿಎಸ್ ಪಕ್ಷ ಬೆಂಬಲ ನೀಡುವುದಾಗಿ ಘೋಷಿಸಿದ ಬಳಿಕ ಹಿಂದೆ ಸರಿದಿತ್ತು. ನಂತರ ಚುನಾವಣೆ ನಡೆದು ಬಹುಮತಗಳಿಸಿದ ಹಿನ್ನಲೆಯಲ್ಲಿ 2008ರ ಮೇ30 ರಂದು 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಮುಂದೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಹಿನ್ನಲೆಯಲ್ಲಿ 2011 ಜು.3 ರಂದು ಸ್ಥಾನ ತ್ಯಜಿಸಬೇಕಾಯಿತು. ಆಗ 3ವರ್ಷದ ಎರಡು ತಿಂಗಳ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.