ರಾಜಕೀಯ

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ಗುಡ್ ಬೈ, ತೆನೆ ಪಕ್ಷಕ್ಕೆ ಸಿಎಂ ಕುಮಾರಸ್ವಾಮಿ ನೇತೃತ್ವ?

Raghavendra Adiga
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹಾಗೂ ಪಕ್ಷದ ಮುಖಂಡರಾದ ದೇವೇಗೌಡ ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ನಡುವೆ ಕೆಲ ಅಸಮಾಧಾನಗಳಿದ್ದು ವಿಶ್ವನಾಥ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯ ವೇಳೆ ತಮ್ಮ ಜತೆಗೆ ಸಂಭಾಷಣೆ ನಡೆಸದೆ ಅಭ್ಯರ್ಥಿಗಳ ಆಯ್ಕೆ ನಡೆಸಿದ್ದಾರೆಂದು ವಿಶ್ವನಾಥ್ ಆಸಮಾಧಾನಗೊಂಡಿದ್ದು ಅವರ ರಾಜೀನಾಮೆಯ ನಂತರ ಕುಮಾರಸ್ವಾಮಿಯವರೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ತಾವು ರಾಜೀನಾಮೆ ನೀಡುವುದನ್ನು ಖಚಿತಪಡಿಸಿದ ಜೆಡಿಎಸ್ ನಾಯಕ  ಅಡಗೂರು ಹೆಚ್ ವಿಶ್ವನಾಥ್ ಈ ಸಂಬಂಧ ಮಂಗಳವಾರ ಅಧಿಕೃತ ಘೋಷಣೆ ಮಾಡುವವರಿದ್ದಾರೆ.
ಮಂಗಳವಾರ ಮಧ್ಯಾಹ್ನ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಸಿಎಂ ಕುಮಾರಸ್ವಾಮಿಯವರ ಮನೆಯಲ್ಲಿ ನಡೆಯಲಿದ್ದು ವಿಶ್ವನಾಥ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವಿನ ನಂತರ ಜೆಡಿಎಸ್ ನಲ್ಲಿ ಆಂತರಿಕ ಅಸಮಾಧಾನಗಳು ಬಲವಾಗಿದೆ ಎಂದು ಮೂಲಗಳು ಹೇಳಿದೆ.ಅದರಂತೆ ಪಕ್ಷವು ಕ್ರಿಯಾತ್ಮಕ ರಾಜ್ಯಾದ್ಯಕ್ಷರನ್ನು ಹುಡುಕುತ್ತಿದೆ.ರಾಜ್ಯದಲ್ಲಿ ಪಕ್ಷಕ್ಕೆ ಹೆಚ್ಚು ಬಲ ತುಂಬಲು ಸಹಾಯವಾಗುವ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕೆಂದು ಪಕ್ಷದ ವರಿಷ್ಟರು ಬಯಸುತ್ತಿದ್ದಾರೆ. ಈ ಸಮಯದಲ್ಲಿ ಸಿಎಂ ಕುಮಾರಸ್ವಾಮಿ ಇದಕ್ಕೆ ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.
ಇನ್ನು ಕುಮಾರಸ್ವಾಮಿ ಪಾಲಿಗಿದು ಹೊಸ ಹುದ್ದೆಯೇನೂ ಅಲ್ಲ, ಈ ಹಿಂದೆ ಸಹ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.  ಈ ನಡುವೆ ಭವಿಷ್ಯದಲ್ಲಿ ವಿಶ್ವನಾಥ್ ಅವರಿಗೆ ರಾಯ ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಬಗೆಗೆ ಸಹ ಊಹಾಪೋಹಗಳು ಕೇಳಿಬಂದಿದೆ.ಸಚಿವ ಸಂಪುಟಕ್ಕೆ ಜೆಡಿಎಸ್ ಇಬ್ಬರು ಶಾಸಕರನ್ನು ನೇಮಕ ಮಾಡಿಕೊಳ್ಳುವದಕ್ಕೆ ಅವಕಾಶವಿದೆ.ಈ ಸಾಧ್ಯತೆ ಬಗೆಗೆ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಕುಮಾರಸ್ವಾಮಿ ಇತ್ತೀಚೆಗೆ ಸಭೆ ನಡೆಸಿದ್ದರು.
SCROLL FOR NEXT