ರಾಜಕೀಯ

ಉಪ ಚುನಾವಣೆಗೆ 3 ಪಕ್ಷಗಳ ಭರದ ಸಿದ್ಧತೆ: ಸಂದಿಗ್ಧ ಸ್ಥಿತಿಯಲ್ಲಿ ಅನರ್ಹ ಶಾಸಕರು

Manjula VN

ಬೆಂಗಳೂರು: ರಾಜ್ಯದ 17 ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿರುವಾಗಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಪ್ರಕಟಗೊಳಿಸಿದ ಬಳಿಕ ಅನರ್ಹ ಶಾಸಕರಲ್ಲಿನ ಆತಂಕ ಮತ್ತಷ್ಟು ಹೆಚ್ಚಾಗಿದೆ. 

ಉಪ ಚುನಾವಣೆಗೆ ಚುನಾವಣಾ ಆಯೋಗ ದಿನಾಕ ಪ್ರಕಟಿಸುತ್ತಿದ್ದಂತೆಯೇ ರಾಜ್ಯದ ಪ್ರಮುಖ ಮೂರು ಪಕ್ಷಗಳು ಚುನಾವಣೆಗೆ ಭರದ ಸಿದ್ಥತೆಗಳನ್ನು ನಡೆಸಲು ಆರಂಭಿಸಿದೆ. 

15 ವಿಧಾನಸಭಾ ಕ್ಷೇತ್ರಗಳ ಚುನಾವಣೆ ಅ.21 ರಂದು ನಡೆಯಲಿದ್ದು, ಮತ ಎಣಿಕೆ ಕಾರ್ಯ ಅ.24ಕ್ಕೆ ನಡೆಯಲಿದೆ. 15 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಉತ್ತರ ಕರ್ನಾಟಕದ್ದೇ ಆಗಿದೆ. ಈಗಾಗಲೇ 11 ಜಿಲ್ಲೆಗಳಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. 

ಉಪಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿ ಮಾಡಿರುವ ಚುನಾವಣಾ ಆಯೋಗ ಪ್ರವಾಹ ಪರಿಹಾರ ಕಾರ್ಯಗಳು ಹಾಗೂ ತುರ್ತು ಕಾರ್ಯಗಳನ್ನು ನಡೆಸುವಂತೆ ಅನುಮತಿ ನೀಡಿದೆ. 

ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ 2018 ವಿಧಾನಸಭಾ ಚುನಾವಣೆ ವಿಚಾರಣೆ ಹೈಕೋರ್ಟ್ ನಲ್ಲಿ ಬಾಕಿಯಿರಿುವುದರಿಂದ ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ. 

ಈ ಉಪ ಚುನಾಣೆ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಮುಖ್ಯವಾಗಿದೆ. ಸದನದ ಸಂಖ್ಯಾಬಲ 207 ಆಗಿದ್ದು, ಬಿಜೆಪಿ 104 ಶಾಸಕರನ್ನು ಹೊಂದಿದೆ. ಮತ್ತೆ ಅಧಿಕಾರಕ್ಕೆ ಬರಲು ಉಪ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನಗಳಲ್ಲಿ ಗೆಲವು ಸಾಧಿಸಲೇಬೇಕಿದೆ. ಉಪ ಚುನಾವಣೆಯಲ್ಲಿ ಗೆಲುವು ತಮ್ಮದಾಗಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಭಾರಿ ಹೋರಾಟಕ್ಕಿಳಿದಿದ್ದು, ಬಿಜೆಪಿಯ ಗೆಲುವಿನ ಹಾದಿ ಅಷ್ಟೊಂದು ಸುಲಭವಾಗಿಲ್ಲ. 

ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗರದ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ರೆಬೆಲ್ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ಇದಲ್ಲದೆ, ರಾಜಧಾನಿ ದೆಹಲಿಗೆ ತೆರಳಿ ಚುನಾವಣಾ ತಂತ್ರಗಳ ಕುರಿತಂತೆ ಪಕ್ಷದ ವರಿಷ್ಟರೊಂದಿಗೆ ಮಾತುಕತೆ ನಡೆಸಿದ್ದಾರೆ. 

SCROLL FOR NEXT