ಬಿಜೆಪಿಯ ಧರ್ಮ ರಾಜಕಾರಣದಿಂದಲೇ ಅದರ ಸರ್ವನಾಶವಾಗಲಿದೆ: ಎಚ್.ಡಿ. ಕುಮಾರಸ್ವಾಮಿ
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಮಹತ್ವ ಪಡೆದಿರುವ ಮಂಡ್ಯದ ಕದನ ಜೋರಾಗಿದೆ. ಸಾಮಾನ್ಯವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇರುವ ಕೆಲ ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದಾಗಿದ್ದು, ಎರಡೂ ಪಕ್ಷಗಳಿಗೆ ಠಕ್ಕರ್ ಕೊಡಲು ಬಿಜೆಪಿ ಹವಣಿಸುತ್ತಿದೆ.
ಬೆಂಗಳೂರು: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಮಹತ್ವ ಪಡೆದಿರುವ ಮಂಡ್ಯದ ಕದನ ಜೋರಾಗಿದೆ. ಸಾಮಾನ್ಯವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇರುವ ಕೆಲ ಜಿಲ್ಲೆಗಳಲ್ಲಿ ಮಂಡ್ಯ ಕೂಡ ಒಂದಾಗಿದ್ದು, ಎರಡೂ ಪಕ್ಷಗಳಿಗೆ ಠಕ್ಕರ್ ಕೊಡಲು ಬಿಜೆಪಿ ಹವಣಿಸುತ್ತಿದೆ.
ಇನ್ನು ಶುಕ್ರವಾರ ಮಾತನಾಡಿದ ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. 2018ರ ಚುನಾವಣೆಯಲ್ಲಿ ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳಲ್ಲಿ ಅತ್ಯಲ್ಪ ಮತಗಳನ್ನು ಪಡೆದಿದ್ದ ಬಿಜೆಪಿಯನ್ನು ಗುರಿಯಾಗಿಸಲು ನಿರ್ಧರಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಆಡಳಿತ ಪಕ್ಷಕ್ಕೆ ಅಭಿವೃದ್ಧಿ ಬೇಕಾಗಿಲ್ಲ. ಇದು ಜನರನ್ನು ಭಾವನಾತ್ಮಕವಾಗಿಸುವ ಮೂಲಕ ಮತ ಪಡೆಯಲು ಮುಂದಾಗಿದೆ. ಆದರೆ, ಮತದಾರರು ಬಿಜೆಪಿಯ ಚೇಷ್ಟೆಗಳಿಗೆ ಬಲಿಯಾಗುವುದಿಲ್ಲ. ಬಿಜೆಪಿಯ ಧರ್ಮ ರಾಜಕಾರಣವೇ ಅದರ ವಿನಾಶಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
2ಎ ಮೀಸಲಾತಿ ಬಯಸುತ್ತಿರುವ ಪಂಚಮಸಾಲಿಗಳ ಕುರಿತು ಮಾತನಾಡಿದ ಅವರು, ಕೋಟಾ ವರ್ಗವನ್ನು ನಿರ್ಧರಿಸುವ ಮೊದಲು ಅವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಸ್ಥಿತಿ ಮತ್ತು ಅವರ ದೈನಂದಿನ ಆದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಹೇಳಿದರು.
ಇತ್ತೀಚೆಗಷ್ಟೇ ಬಿಜೆಪಿ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್ ಅವರು ಜೆಡಿಎಸ್ ಅನ್ನು ಟೀಕಿಸಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಯೋಗೇಶ್ವರ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಯೋಗೇಶ್ವರ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಜೆಡಿಎಸ್‌ಗೆ ಬಿಜೆಪಿಯಿಂದ ತೀವ್ರ ಪೈಪೋಟಿ ಎದುರಾಗುವ ಮತ್ತೊಂದು ಕ್ಷೇತ್ರವಾಗಿದೆ. ಈ ಬಾರಿ ಜೆಡಿಎಸ್ ಮಂಡ್ಯದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದ್ದು, ಪಂಚರತ್ನ ಯಾತ್ರೆಯಲ್ಲಿ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿರುವುದು ಪಕ್ಷದಲ್ಲಿ ಆತ್ಮವಿಶ್ವಾಸ ಮೂಡಿಸಿದೆ.