ರಾಜಕೀಯ

ಎಂಎಲ್ ಸಿ ಟಿಕೆಟ್ ಗೆ ಬಿಜೆಪಿಯಲ್ಲಿ ಲಾಬಿ ಶುರು: ಆರ್ ಎಸ್ ಎಸ್ ನಿಷ್ಠರಿಗೆ ಹೈಕಮಾಂಡ್ ಮಣೆ?

Shilpa D

ಬೆಂಗಳೂರು: ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯಿಂದ ವಿಧಾನಪರಿಷತ್‌ ಸದಸ್ಯರ ಆಯ್ಕೆಗೆ ಅಧಿಸೂಚನೆ ಹೊರಬಿದ್ದಿದ್ದು, ಆ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಈಗಾಗಲೇ ಲಾಬಿ ಆರಂಭವಾಗಿದೆ.

121 ಶಾಸಕರನ್ನು ಹೊಂದಿರುವ ಬಿಜೆಪಿ ಏಕೈಕ ಸ್ಥಾನವನ್ನು ಗಳಿಸುವುದು ಖಚಿತವಾಗಿದ್ದು,  ಇದಕ್ಕಾಗಿ ಪಕ್ಷದ ನಾಯಕರು ಮತ್ತು ಆರೆಸ್ಸೆಸ್ ನಿಷ್ಠರ ಹೆಸರುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ನಡೆದ ಈಶಾನ್ಯ ಶಿಕ್ಷಕರ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ ವಿರುದ್ಧ ಸೋತಿದ್ದ ಮಾಜಿ ಎಂಎಲ್‌ಸಿ ಅರುಣ್ ಶಾಪುರ ಅವರು ಉತ್ತಮ ಚರ್ಚಾ ಪಟುವಾಗಿದ್ದು ಮೇಲ್ಮನೆಗೆ ಮರಳಬೇಕೆಂದು ಆರ್‌ಎಸ್‌ಎಸ್ ನಾಯಕರು ಸೇರಿದಂತೆ ಪಕ್ಷದ ನಿಷ್ಠಾವಂತರು ಒತ್ತಾಯಿಸುತ್ತಿದ್ದಾರೆ.

ಮಾಜಿ ಸಚಿವ ಡಾ.ಗುರುಪಾದಪ್ಪ ಸಂಗನಬಸಪ್ಪ ನಾಗಮಾರಪಳ್ಳಿ ಅವರ ಪುತ್ರ ಸೂರ್ಯಕಾಂತ್ ಜಿ ನಾಗಮಾರಪಳ್ಳಿ, ಹುಮಬಾದ್ ಮಾಜಿ ಶಾಸಕ ಸುಭಾಷ್ ಕಲ್ಲೂರ್ ಕೂಡ ಕಣದಲ್ಲಿದ್ದಾರೆ. ಇಬ್ಬರೂ ಹೈದರಾಬಾದ್-ಕರ್ನಾಟಕ ಪ್ರದೇಶದ ಬೀದರ್ ಜಿಲ್ಲೆಯವರಾಗಿದ್ದಾರೆ. ಬಿಜೆಪಿ ತನ್ನ ನೆಲೆಯನ್ನು ಬಲಪಡಿಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.

ಮಹಿಳೆಯರಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ ಮಂಜುಳಾ ವಕ್ತಾರರು ಮುಂಚೂಣಿಯಲ್ಲಿದ್ದಾರೆ. ಕಳೆದ ಬಾರಿ ಅವಕಾಶದಿಂದ ವಂಚಿತರಾದವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಪಕ್ಷದ ಅಚ್ಚರಿ ಆಯ್ಕೆಯನ್ನು ತಳ್ಳಿ ಹಾಕುವಂತಿಲ್ಲ.

ಹೊಸದಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರ  ಅಧಿಕಾರಾವಧಿಯು ಜೂನ್ 17, 2024 ರಂದು ಕೊನೆಗೊಳ್ಳಲಿದೆ. ಬಿಜೆಪಿಯು ಗೆದ್ದರೆ, 75 ಸದಸ್ಯರ ಸದನದಲ್ಲಿ 40 ಸ್ಥಾನಗಳಿಗೆ ಬಿಜೆಪಿ ಸದಸ್ಯರ ಸಂಖ್ಯೆ ಏರಲಿದೆ. ಇದರಿಂದ ಬಹುಮತದೊಂದಿಗೆ ಕೆಲವು ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಲು ಸಹಾಯವಾಗುತ್ತದೆ.

SCROLL FOR NEXT