ರಾಜಕೀಯ

ಸವದಿ, ಶೆಟ್ಟರ್ ಇಲ್ಲದ ಬಿಜೆಪಿ: ಲಿಂಗಾಯತ ಬ್ರ್ಯಾಂಡ್ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಕಮಲ ನಾಯಕರು!

Shilpa D

ಬೆಂಗಳೂರು: ಲಿಂಗಾಯತ ವಿರೋಧಿ ಎಂಬ ಕಾಂಗ್ರೆಸ್ ನೀಡಿರುವ ಹಣೆ ಪಟ್ಟಿಯನ್ನು ತೊಡೆದುಹಾಕಲು ಯತ್ನಿಸುತ್ತಿರುವ ಬಿಜೆಪಿ ತನ್ನನ್ನು ಲಿಂಗಾಯತ ಪರ ಎಂದು ಬಿಂಬಿಸಲು ಸಜ್ಜಾಗುತ್ತಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಬುಧವಾರ ತಡರಾತ್ರಿ ಸಮುದಾಯದ ಮುಖಂಡರು ಸಭೆ ನಡೆಸಿ, ಲಿಂಗಾಯತ ಸಮುದಾಯದವರ ಮುಂದಿನ ಮುಖ್ಯಮಂತ್ರಿಯನ್ನೂ ಪಕ್ಷ ಘೋಷಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಸುಳ್ಳು ಆರೋಪಕ್ಕೆ ಹೇಗೆ ಉತ್ತರಿಸಬೇಕು ಎಂದು ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ. ಲಿಂಗಾಯತ ಸಿಎಂ ಬಗ್ಗೆ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಪಕ್ಷದ ನಾಯಕರೊಂದಿಗೆ ಈ ಬಗ್ಗೆ ಮಾತನಾಡುವುದಾಗಿ ಭರವಸೆ ನೀಡಿದರು.

ಕರ್ನಾಟಕದಲ್ಲಿ 20 ಪ್ರತಿಶತದಷ್ಟು ಜನಸಂಖ್ಯೆ ಹೊಂದಿರುವ ಲಿಂಗಾಯತರು ಪ್ರಬಲ ಸಮುದಾಯವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ, ಕಾಂಗ್ರೆಸ್ ನಾಯಕರು ಬಿಜೆಪಿಯನ್ನು "ಲಿಂಗಾಯತ ವಿರೋಧಿ" ಎಂದು ಕರೆಯುತ್ತಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ವಿಮಾನ ನಿಲ್ದಾಣದಲ್ಲಿ ಈ ವಿಷಯ ತಿಳಿಸಲಾಯಿತು ಎಂದು ಸ್ಮರಿಸಿದರು. “ಕಾಂಗ್ರೆಸ್ ನಾಯಕ ಎಂ ರಾಜಶೇಖರ ಮೂರ್ತಿ ಅವರನ್ನೂ ಕಡೆಗಣಿಸಲಾಗಿದೆ. ಪಕ್ಷವು ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿತು. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಪಕ್ಷವನ್ನು ಜನರು ಕ್ಷಮಿಸುವುದಿಲ್ಲ. ಕಾಂಗ್ರೆಸ್ ದಲಿತರು, ಹಿಂದುಳಿದವರು ಮತ್ತು ಲಿಂಗಾಯತರಿಗೆ ಮೋಸ ಮಾಡಿದೆ'' ಎಂದರು.

ಲಿಂಗಾಯತ ಮುಖಂಡರ ಬೇಡಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಮುಖ್ಯಮಂತ್ರಿ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಲು ಲಿಂಗಾಯತ ಮುಖಂಡರ ಸಭೆ ನಡೆಸಲಾಗಿತ್ತು. ಕಾಂಗ್ರೆಸ್ ಆರೋಪಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಮತ್ತು ಲಿಂಗಾಯತ ಸಿಎಂ ಬಗ್ಗೆ ಕೆಲವು ನಾಯಕರು ಸಲಹೆಗಳನ್ನು ನೀಡಿದ್ದಾರೆ. ಲಿಂಗಾಯತ ಸಿಎಂ ಘೋಷಣೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ನಿರಂತರವಾಗಿ ಪ್ರಯತ್ನಿಸುತ್ತಿರುವುದರಿಂದ, ಲಿಂಗಾಯತ ಕೋಟಾವನ್ನು ಹೆಚ್ಚಿಸಿರುವ ಮೀಸಲಾತಿ ನೀತಿಯ ಬಗ್ಗೆ ಅಭ್ಯರ್ಥಿಗಳಿಗೆ ಒತ್ತು ನೀಡುವಂತೆ ತಿಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷವು ಧರ್ಮವನ್ನು ಒಡೆದು ಪ್ರತ್ಯೇಕ ಲಿಂಗಾಯತ ಧರ್ಮದ ಟ್ಯಾಗ್ ಪಡೆಯಲು ಹೇಗೆ ಪ್ರಯತ್ನಿಸಿತು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಕೇಂದ್ರ ಸಚಿವರು ಕರ್ನಾಟಕದಲ್ಲಿದ್ದಾಗಲೆಲ್ಲ ಲಿಂಗಾಯತ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಜೆಪಿ ನಾಯಕರು ಮತ್ತು ಅಭ್ಯರ್ಥಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವಂತೆಯೂ ಹೇಳಲಾಗಿದೆ ಎಂದು ತಿಳಿದು ಬಂದಿದೆ.

ಶಿಕಾರಿಪುರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಟ್ವೀಟ್ ಮಾಡಿ, 'ಕಾಂಗ್ರೆಸ್ ತನ್ನ ಮತ ಬ್ಯಾಂಕ್ ರಾಜಕಾರಣಕ್ಕಾಗಿ ವೀರಶೈವ-ಲಿಂಗಾಯತರನ್ನು ವಿಭಜಿಸಲು ಮತ್ತು  ಒಗ್ಗಟ್ಟನ್ನು ಕಡಿಮೆ ಮಾಡಲು ಪ್ರಯತ್ನಿಸಿತು.ನಿಜವೆಂದರೆ ಬಿಜೆಪಿ ಯಾವಾಗಲೂ ಲಿಂಗಾಯತ ಸಮುದಾಯ ಮತ್ತು ಅದರ ಆಕಾಂಕ್ಷೆಗಳ ಪರವಾಗಿದೆ. ಲಿಂಗಾಯತರು ಬಿಜೆಪಿಯಿಂದ ಗರಿಷ್ಠ ಪ್ರಾತಿನಿಧ್ಯ ಪಡೆದಿದ್ದಾರೆ. ಲಿಂಗಾಯತರ ಬಗ್ಗೆ ಮಾತನಾಡುವ ಧೈರ್ಯ ಕಾಂಗ್ರೆಸ್‌ಗೆ ಇನ್ನೂ ಇದೆ ಎಂಬುದು ತಮಾಷೆಯಾಗಿದೆ ಎಂದು ಟ್ವೀಟ್ ಮಾಡಿದ್ದರು.

SCROLL FOR NEXT