ರಾಜಕೀಯ

ಇಂದು ಹೈದರಾಬಾದ್ ಗೆ ಡಿ ಕೆ ಶಿವಕುಮಾರ್: ಕಾಂಗ್ರೆಸ್ ಶಾಸಕರನ್ನು ಒಗ್ಗೂಡಿಸುವ ಕೆಲಸವನ್ನು ಟ್ರಬಲ್ ಶೂಟರ್ ಗೆ ನೀಡಿದೆಯೇ ಹೈಕಮಾಂಡ್?

Sumana Upadhyaya

ಬೆಂಗಳೂರು/ಹೈದರಾಬಾದ್: ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಸೆಮಿಫೈನಲ್ ಎಂದೇ ಹೇಳಲಾಗುತ್ತಿರುವ ತೆಲಂಗಾಣ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಮುಗಿದು ನಾಳೆ ನಾಲ್ಕು ರಾಜ್ಯಗಳ ಫಲಿತಾಂಶ ಹೊರಬೀಳಲಿದೆ. 

ಈ ಬಾರಿ ತೆಲಂಗಾಣದಲ್ಲಿ ತೀವ್ರ ಹಣಾಹಣಿಯಿದ್ದರೂ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಲಿದೆ ಎಂದು ಎಕ್ಸಿಟ್ ಪೋಲ್ ಗಳು ಹೇಳುತ್ತಿವೆ. ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದು ಕರೆಯಲ್ಪಡುವ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೆಲಂಗಾಣ ಚುನಾವಣೆಯನ್ನು ಮುಖ್ಯವಾಗಿ ಪರಿಗಣಿಸಿ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಈಗ ಚುನಾವಣೆ ಮುಗಿದು ಯಾವ ಪಕ್ಷ ಅಧಿಕಾರಕ್ಕೆ ಏರಲಿದೆ ಎಂದು ಚರ್ಚೆಗಳು ನಡೆಯುತ್ತಿರುವಾಗ ಕುದುರೆ ವ್ಯಾಪಾರ ಶಾಸಕರಿಗೆ ಆಮಿಷವೊಡ್ಡಿ ಖರೀದಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಇಂದು ಡಿ ಕೆ ಶಿವಕುಮಾರ್ ಹೈದರಾಬಾದ್‌ಗೆ ಆಗಮಿಸುವ ನಿರೀಕ್ಷೆಯಿದೆ. ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರನ್ನು ಒಟ್ಟಿಗೆ ಇರಿಸಲು ಪಕ್ಷದ ಹೈಕಮಾಂಡ್ ಅವರನ್ನು ಕಳುಹಿಸುತ್ತಿದೆ ಎಂದು ಹೇಳಲಾಗಿದೆ. 

ಪಕ್ಷದ ಹೈಕಮಾಂಡ್ ಕೇಳಿದರೆ ಐದು ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ಹೊಸ ಕಾಂಗ್ರೆಸ್ ಶಾಸಕರನ್ನು ಒಗ್ಗಟ್ಟಿನಿಂದ ಇರಿಸಿ ಸರ್ಕಾರ ರಚನೆ ಮಾಡಲು ನೆರವಾಗಲು ನಾನು ಸಿದ್ಧ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. 

ನವೆಂಬರ್ 30 ರಂದು ಮತದಾನ ನಡೆದ ತೆಲಂಗಾಣದಲ್ಲಿ ಕಾಂಗ್ರೆಸ್ 63ರಿಂದ 73 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಆಡಳಿತಾರೂಢ ಬಿಆರ್‌ಎಸ್ 34 ರಿಂದ 44 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ಮೂರನೇ ಬಾರಿ ಬಿಆರ್ ಎಸ್ ಅಧಿಕಾರಕ್ಕೆ ಏರುವ ಕನಸು ಭಗ್ನವಾಗಲಿದೆ ಎಂದು ಎಕ್ಸಿಟ್ ಪೋಲ್ ತೋರಿಸಿದೆ. ತೆಲಂಗಾಣದಲ್ಲಿ ಶೇ.71.34ರಷ್ಟು ಮತದಾನವಾಗಿದೆ. 

SCROLL FOR NEXT