ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಿಂದ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾಸಿಕ 2000 ರೂ.ಗಳನ್ನು ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗುರುವಾರ ವಾಗ್ದಾಳಿ ನಡೆಸಿತು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ಜನರು ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇದು ಜನವಿರೋಧಿ ಸರ್ಕಾರ ಎಂದು ಟೀಕಿಸಿದರು.
ಸಮೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ಕಳೆದೊಂದು ವರ್ಷದಲ್ಲಿ ಅಭಿವೃದ್ಧಿ ಆರಂಭವೇ ಆಗಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಇವರು ಚಾಲನೆಯನ್ನೇ ಕೊಟ್ಟಿಲ್ಲ. ಮಹಿಳೆಯರಿಗೆ ಗೃಹಲಕ್ಷ್ಮಿ ಎಂದರು ಲೋಕಸಭಾ ಚುನಾವಣೆ ಬಂದಿತ್ತು. ಮತದಾನಕ್ಕೆ 3-4 ದಿನಗಳ ಮೊದಲು 3 ಕಂತು ಬಿಡುಗಡೆ ಮಾಡಿದ್ದರು. ಈಗ ಮತ್ತೆ ಜಿಲ್ಲಾ ಪಂಚಾಯಿತಿ ಮತ್ತಿತರ ಚುನಾವಣೆ ವೇಳೆ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬರದಿದ್ದರೆ ಗ್ಯಾರಂಟಿ ಸ್ಥಗಿತ ಎಂದು ಬೆದರಿಸಿದ್ದರು. ಉಚಿತ ಬಸ್ ಪ್ರಯಾಣದಿಂದ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ಮಹಿಳೆಯರ ಮೂಗಿಗೆ ತುಪ್ಪ ಹಚ್ಚಿದ್ದಾರೆ ಎಂದು ಟೀಕಿಸಿದರು.
ಇದೇ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಘಟನೆಗಳು ನಡೆದಾಗ ಸಿಎಂ ಹಾಗೂ ಗೃಹ ಸಚಿವರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದರು.