ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗುತ್ತಿದ್ದು, ಇದಕ್ಕೆ ಅಹಿಂದ ಸಮಾವೇಶ ವೇದಿಕೆಯಾಗುವ ಸಾಧ್ಯತೆ ಇದೆ.
ಸಿಎಂ ಬದಲಾವಣೆ ಕೂಗು ಮುನ್ನೆಲೆಗೆ ಬಂದ ಬೆನ್ನಲ್ಲೆ, ಸಿಎಂ ಸಿದ್ದರಾಮಯ್ಯ ಆಪ್ತ ಬಣ ಸಾಕಷ್ಟು ಸಿದ್ದತೆಗಳನ್ನ ಮಾಡಿಕೊಂಡಿದೆ. ಮತ್ತೊಂದು ಸಿದ್ದರಾಮೋತ್ಸವ ಮೂಲಕ ಅಹಿಂದ ಸಮಾವೇಶ ನಡೆಸಲು ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮೋತ್ಸವ ನಡೆಸಿ ಶಕ್ತಿ ಪ್ರದರ್ಶನ ನಡೆಸಿ ಯಶಸ್ವಿಯಾಗಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಮೂಲಕ, ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕೂಗು ಹೈಕಮಾಂಡ್ ನಾಯಕರಿಗೆ ಮುಟ್ಟುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಸಿದ್ದರಾಮಯ್ಯ ಬೆಂಬಲಿಗರು ಆಗಸ್ಟ್‌ನಲ್ಲಿ ಅವರ 77 ನೇ ಹುಟ್ಟುಹಬ್ಬವನ್ನು ಆಚರಿಸಲು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ರ್ಯಾಲಿಯನ್ನು ನಡೆಸುವ ಸಾಧ್ಯತೆಯಿದೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ರ್ಯಾಲಿ ಆಯೋಜಿಸಲು ಪೂರ್ವಭಾವಿ ಸಭೆಗಳು ನಡೆದಿದ್ದು, ಅಹಿಂದ ಮುಖಂಡರ ನಿಯೋಗ ಭಾನುವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಿಎಂ ಬದಲಾವಣೆ ಮಾಡಿದ್ರೆ ರಾಜ್ಯ ಹೊತ್ತಿ ಉರಿಯುತ್ತೆ
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅಹಿಂದ ಜಿಲ್ಲಾಧ್ಯಕ್ಷ ಮತ್ತಣ್ಣ ಶಿವಳ್ಳಿ, ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡ್ತಾ ಇದ್ದೀವಿ. ಸಿದ್ದರಾಮಯ್ಯ ನವರು ಕಾರ್ಯಕ್ರಮಕ್ಕೆ ಬರ್ತಾರೆ. ಅವರು ಡೇಟ್ ಕೊಟ್ಟ ದಿನವೇ ಕಾರ್ಯಕ್ರಮ ಮಾಡ್ತೀವಿ. ದಕ್ಷಿಣ ಭಾರತದ್ಯಾಂತ ಸಿದ್ದರಾಮಯ್ಯ ಅಭಿಮಾನಿಗಳಿದ್ದಾರೆ. ನೋಡೋ ಜನ ಶಕ್ತಿ ಪ್ರದರ್ಶನ ಅಂದು ಕೊಳ್ಳಬಹುದು. ಆದ್ರೆ ನಾವು ಅವರ ಅಭಿಮಾನಕ್ಕೆ ಕಾರ್ಯಕ್ರಮ ಮಾಡ್ತೀದಿವಿ.
ಅಹಿಂದ ಹುಟ್ಟು ಹಾಕಿದ್ದು ಸಿದ್ದರಾಮಯ್ಯ. ಅಹಿಂದ ವರ್ಗವನ್ನು ಜಾಗೃತಿ ಮಾಡಿದ್ದು ಸಿದ್ದರಾಮಯ್ಯ. ಸಿದ್ದರಾಮಯ್ಯ ಅಹಿಂದ ರತ್ನ ಪ್ರಶಸ್ತಿ ನೋಡೋದೆ ಖುಷಿ. ಸಿದ್ದರಾಮಯ್ಯ ಎಲೆಕ್ಟೆಡ್ ಸಿಎಂ, ಸೆಲೆಕ್ಟಡ್ ಸಿಎಂ ಅಲ್ಲ. ಕಾಂಗ್ರೆಸ್ ಹುಚ್ಚು ಸಾಹಸಕ್ಕೆ ಕೈ ಹಾಕಲ್ಲ. ಅವರ ಬದಲಾವಣೆ ಮಾಡಿದ್ರೆ ಅನುಭವಿಸಲಾರದ ನಷ್ಟ ಅನುಭವಿಸ್ತಾರೆ. ಅಹಿಂದ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಅಹಿಂದ. ಅಕಸ್ಮಾತ್ ಬದಲಾವಣೆ ಮಾಡಿದ್ರೆ ದಕ್ಷಿಣ ಭಾರತ ಬೆಂಕಿ ಹತ್ತಿ ಉರಿಯತ್ತೆ ಅಂತ ಮುತ್ತಣ್ಣ ತಿಳಿಸಿದ್ದಾರೆ.
ಈ ಬಾರಿ ಸಿಎಂ ಸಿದ್ದರಾಮಯ್ಯ ಅವರ 76ನೇ ಹುಟ್ಟು ಹಬ್ಬದ ಹಿನ್ನೆಯಲ್ಲಿ, ಆಗಸ್ಟ್ ನಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಮಟ್ಟದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆಯಾಗ್ತಿದೆ. ಹುಬ್ಬಳ್ಳಿಯನ್ನೇ ಆಯ್ಕೆ ಮಾಡಿಕೊಳ್ಳೊದಕ್ಕೆ ಮುಖ್ಯ ಕಾರಣವು ಇದೆ. ಅಹಿಂದ ಸಂಘಟನೆ ಮಾಡುವಾಗಲೇ ಪಕ್ಷದಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ ಮನಸ್ತಾಪದಿಂದ ಪಕ್ಷದಿಂದ ಹೊರಬಂದು ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡಿ ಯಶಸ್ವಿಯಾಗಿರೋ ಕಾರಣ ಮತ್ತೆ ಹುಬ್ಬಳಿಯಲ್ಲೆ ಸಮಾವೇಶಕ್ಕೆ ನಡೆಸೋದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.
ಇತ್ತೀಚೆಗಷ್ಟೇ ರ್‍ಯಾಲಿ ಆಯೋಜಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಡಿಎಸ್‌ಎಸ್ ಮುಖಂಡ ಮಾವಳ್ಳಿ ಶಂಕರ್ ಹೇಳಿದರು. ಆದರೆ, ರ್‍ಯಾಲಿ ನಡೆಸುವ ಕುರಿತು ಇನ್ನೂ ಚರ್ಚೆ ನಡೆಯಬೇಕಿದೆ ಎಂದು ಮಾಜಿ ಸಚಿವ ಎಚ್‌ಎಂ ರೇವಣ್ಣ ಸಮರ್ಥಿಸಿಕೊಂಡರು. ಅದರಲ್ಲೂ ಹುಬ್ಬಳ್ಳಿ ಭಾಗದ ಹಲವು ಕುರುಬ ಮುಖಂಡರು ರ್‍ಯಾಲಿ ನಡೆಸಲು ಉತ್ಸುಕರಾಗಿದ್ದಾರೆ. ರ್‍ಯಾಲಿಯಲ್ಲಿ ಅಹಿಂದ ಪರ ಹೋರಾಟ ಮಾಡಿದ 50 ನಾಯಕರಿಗೆ ‘ಅಹಿಂದ ರತ್ನ’ ಪ್ರಶಸ್ತಿಗಳನ್ನು ನೀಡಲಾಗುವುದು.