ಎಚ್‌ಡಿ ಕುಮಾರಸ್ವಾಮಿ - ಬಿವೈ ವಿಜಯೇಂದ್ರ
ಎಚ್‌ಡಿ ಕುಮಾರಸ್ವಾಮಿ - ಬಿವೈ ವಿಜಯೇಂದ್ರ 
ರಾಜಕೀಯ

ಕೇವಲ ಎರಡು ಸೀಟು ಪಡೆಯಲು ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ? ಬಿಜೆಪಿ ನಡೆಗೆ ಕುಮಾರಸ್ವಾಮಿ ಬೇಸರ

Lingaraj Badiger

ಬೆಂಗಳೂರು: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಬಿಜೆಪಿ ತನ್ನ ಮಿತ್ರ ಪಕ್ಷವಾದ ಜೆಡಿಎಸ್‌ಗೆ ಕೇವಲ ಎರಡು ಸ್ಥಾನಗಳನ್ನು ನೀಡಲಿದೆ ಎಂಬ ವರದಿಗಳ ನಡುವೆಯೇ, ಪ್ರಾದೇಶಿಕ ಪಕ್ಷದ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅಲಕಪ ಸೋಮವಾರ ಕೇಸರಿ ಪಕ್ಷದ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿಗೆ ಸೂಚಿಸಿದರೂ ಕೋಲಾರ ಕ್ಷೇತ್ರವನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಧಿಕೃತ ಘೋಷಣೆ ಆಗುವವರೆಗೆ ನಾನು ಮಾತನಾಡುವುದಿಲ್ಲ. ನಾನು ಆರು ಅಥವಾ ಏಳು ಸ್ಥಾನಗಳನ್ನು ಕೇಳಿಲ್ಲ, ನಮ್ಮಿಬ್ಬರ ನಡುವೆ ಚರ್ಚೆ ಆರಂಭವಾದ ದಿನದಿಂದಲೂ ನಾವು ಮೂರ್ನಾಲ್ಕು ಸ್ಥಾನಗಳನ್ನು ಕೇಳಿದ್ದೇವೆ ಎಂದರು.

ಇಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಕೋರ್ ಕಮಿಟಿ ಸದಸ್ಯರು, ಎಲ್ಲಾ ಲೋಕಸಭಾ ಕ್ಷೇತ್ರಗಳ ವೀಕ್ಷಕರು, ಜಿಲ್ಲಾಧ್ಯಕ್ಷರು, ಹಾಲಿ ಹಾಗೂ ಮಾಜಿ ಶಾಸಕರ ಸಭೆ ನಡೆಯಿತು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಜೆಡಿಎಸ್‌ನ ಬಲಾಬಲ ಗೊತ್ತಿದ್ದು, ಅವರು ತಮ್ಮ ಪಕ್ಷಕ್ಕೆ ಮೂರರಿಂದ ನಾಲ್ಕು ಸ್ಥಾನಗಳನ್ನು ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

“ಎರಡು ಸೀಟು ಪಡೆಯಲು ಇಷ್ಟೆಲ್ಲಾ ಪ್ರಯತ್ನ ಮಾಡಬೇಕಾ?, ಇಷ್ಟೆಲ್ಲಾ ಹೊಂದಾಣಿಕೆ ಮಾಡಿಕೊಳ್ಳಬೇಕಾ?, ಈಗಲೂ ಹಾಸನ, ಮಂಡ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ನಮ್ಮ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುತ್ತಾರೆ’’ ಎಂದರು.

ನಮ್ಮ ಉದ್ದೇಶ ಕಾಂಗ್ರೆಸ್​ ಪಕ್ಷವನ್ನು ಎಲ್ಲಾ 28 ಕ್ಷೇತ್ರಗಳಲ್ಲಿ ಸೋಲಿಸುವುದಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜಾಪುರ ಕಲುಬರ್ಗಿಯಲ್ಲಿ ನಮ್ಮ ಶಕ್ತಿ ಬಿಜೆಪಿಗಿಂತ ಹೆಚ್ಚಾಗಿದೆ. ಇಂತಹ ಕ್ಷೇತ್ರಗಳಲ್ಲಿ ನಮ್ಮನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆಯಾಗಬೇಕು. ನಮ್ಮನ್ನ ಕಡೆಗಣಿಸಿದರೆ ಅದರಿಂದಾಗುವ ಪರಿಣಾಮಗಳನ್ನು ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದರು.

ಉಭಯ ಪಕ್ಷಗಳ ಮುಖಂಡರ ಭೇಟಿಯಾಗಲಿ, ಪ್ರಚಾರದಲ್ಲಿ ಒಟ್ಟಾಗಿ ಕೆಲಸ ಮಾಡುವುದಾಗಲಿ ಅಥವಾ ಬೂತ್ ಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ತೊಡಗಿಸಿಕೊಳ್ಳುವುದು ಸೇರಿದಂತೆ ಸೂಕ್ತ ಸಮನ್ವಯತೆ ಇರಬೇಕು ಎಂದರು.

ಬಿಜೆಪಿ ಜೆಡಿಎಸ್ ಹೊಂದಾಣಿಕೆ ಜೆಡಿಎಸ್​ಗೆ ಹೆಚ್ಚು ಅನುಕೂಲವಾಗಿಲ್ಲ ಅಂತಾ ನಮ್ಮ ಮುಖಂಡರೊಬ್ಬರು ಹೇಳಿದರು. 18 ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶೇಕಡಾ 3 ಮತಗಳು ಸ್ವಿಂಗ್ ಆದರೆ ಬಿಜೆಪಿಗೆ ಅನುಕೂಲವಾಗುತ್ತದೆ. ಇದನ್ನ ಹೈಕಮಾಂಡ್ ಗಮನಕ್ಕೆ ತನ್ನಿ ಅಂತಾ ಹೇಳಿದ್ದಾರೆ. ಇದಕ್ಕೆ ಮುಂದೆ ಪೆಟ್ಟು ಬಿದ್ದರೆ ಅದರ ಸಾಧಕ ಬಾಧಕಕ್ಕೆ ಅವರೇ ಜವಾಬ್ದಾರಿ ಎಂದರು.

ಏತನ್ಮಧ್ಯೆ, ತಾವು ಮಂಗಳವಾರ ವೈದ್ಯಕೀಯ ಚಿಕಿತ್ಸೆಗಾಗಿ ಚೆನ್ನೈಗೆ ಹೋಗುತ್ತಿರುವುದಾಗಿ ಮತ್ತು ಐದು ದಿನಗಳವರೆಗೆ ತಾವು ಲಭ್ಯವಿರುವುದಿಲ್ಲ ಎಂದು ಮಾಜಿ ಸಿಎಂ ತಿಳಿಸಿದ್ದಾರೆ.

SCROLL FOR NEXT