ಬೆಂಗಳೂರು: ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಆಹ್ವಾನ ನೀಡದೆ, ಕಡೆಗಣಿಸಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆಯವರು, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸ್ವಪಕ್ಷದವರು ವಿರೋಧಿಸುವ ನಾಯಕನಾಗಿದ್ದಾರೆಯೇ? ಬೆಂಗಳೂರು ಮೆಟ್ರೋ ಫೇಸ್ 2 ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿರುವ ಕೇಂದ್ರ ಸರ್ಕಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೇ ವೇದಿಕೆಯಲ್ಲಿ ಜಾಗ ನೀಡುವುದನ್ನು ನಿರಾಕರಿಸಿದೆ. ಕೇಂದ್ರ ಸರ್ಕಾರ ಪ್ರೊಟೋಕಾಲ್ ಮರೆತಿದೆಯೇ? ಅಥವಾ ಉದ್ದೇಶಪೂರ್ವಕ ಕಡೆಗಣನೆಯೇ? ಎಂದು ಪ್ರಶ್ನಿಸಿದ್ದಾರೆ.
ಮೊದಲ ಬಾರಿ ಶಾಸಕರಾಗಿರುವ ಹಾಗೂ ಬೆಂಗಳೂರಿನ ಶಾಸಕರಲ್ಲದಿರುವ ವಿಜಯೇಂದ್ರ ಅವರಿಗೆ ಸಿಕ್ಕ ಅವಕಾಶ ಅಶೋಕ್ ಅವರಿಗಿಲ್ಲ. ಅಶೋಕ್ ಅವರೇ ತಾವು ಬೆಂಗಳೂರು ಶಾಸಕರಾಗಿದ್ದರೂ, ವಿರೋಧ ಪಕ್ಷದ ನಾಯಕನಾಗಿದ್ದರೂ, ಬಿಜೆಪಿ ಪಕ್ಷದ ಹಿರಿಯ ನಾಯಕ ಎನಿಸಿಕೊಂಡಿದ್ದರೂ, ಹಲವು ಬಾರಿ ಆಯ್ಕೆ ಆಗಿದ್ದರೂ ನಿಮ್ಮನ್ನು ಕಡೆಗಣಿಸಲಾಗಿದೆ ಎಂದರೆ ನಿಮ್ಮ ಕುರ್ಚಿ ಕಿತ್ತುಕೊಳ್ಳುವ ಸಂದೇಶ ಬಂದಿದೆ ಎಂದು ಭಾವಿಸೋಣವೇ?
ಯಾರು ಯಾರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿಲ್ಲ ಎಂದು ತಲೆಕೆಡಿಸಿಕೊಂಡು ಕುಳಿತಿದ್ದ ತಮಗೆ ಈಗ “ನನಗೇಕೆ ಆಹ್ವಾನವಿಲ್ಲ” ಎಂದು ತಲೆಕೆಡಿಸಿಕೊಂಡು ಕೂರುವ ಸಮಯ ಬಂದಿದೆ. ಇನ್ನಾದರೂ ಇತರರ ಮನೆ ಇಣುಕುವ ಬದಲು ನಿಮ್ಮ ಬುಡ ಅಲ್ಲಾಡುತ್ತಿರುವುದನ್ನು ಗಮನಿಸಿದರೆ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಆರ್.ಅಶೋಕ್ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ.ಶಿವಕುಮಾರ್ ಅವರ ನಡುವಿನ ಸಂಬಂಧ ಚೆನ್ನಾಗಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಆದರೆ, ಡಿಕೆ.ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಿದ್ದರಾಮಯ್ಯ ಅವರು ಕನಿಷ್ಟ ಪಕ್ಷ ಒಂದು ಟ್ವೀಟ್ ಕೂಡ ಮಾಡದಷ್ಟು ಹದಗೆಟ್ಟಿದೆ ಎಂಬುದು ಗೊತ್ತಿರಲಿಲ್ಲ. ಒಬ್ಬರ ಮುಖ ಒಬ್ಬರು ನೋಡಲಾಗದ ಈ ನಾಯಕರು ರಾಜ್ಯವನ್ನು ಹೇಗೆ ಮುನ್ನಡೆಸುತ್ತಾರೆ? ಕನ್ನಡಿಗರು ಕಾಂಗ್ರೆಸ್ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದರು.