ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆಯಾದ ದಿನದಿಂದ ವಿವಾದಗಳಿಂದ ಗುರುತಿಸಿಕೊಂಡವರು ಕೆಎನ್ ರಾಜಣ್ಣ. ಆರಂಭದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಬಗ್ಗೆ ಮೊದಲು ಧ್ವನಿ ಎತ್ತಿದವರು. ಇದರಿಂದ ಡಿಕೆ ಶಿವಕುಮಾರ್ ಹಾಗೂ ರಾಜಣ್ಣ ನಡುವೆ ತೀವ್ರ ಅಸಮಾಧಾನ ಉಂಟಾಗಿತ್ತು. ಮೇಲ್ನೋಟಕ್ಕೆ ಇದು ರೆಗ್ಯುಲರ್ ರಾಜೀನಾಮೆಯಂತೆ ಕಾಣುತ್ತಿದೆ. ಆದರೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಂಪುಟದಿಂದ ವಜಾಗೊಂಡಿದ್ದಾರೆ. ನಿರ್ಗಮನದ ನಂತರ ಅವರ ಮುಖದಲ್ಲಿ ಶಾಂತತೆಯಿದೆ, ಆದರೆ ಒಳಗೊಳಗೆ ಕುದಿಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮಿತ್ರ, ಎಸ್‌ಟಿ ಸಮುದಾಯದ ಪ್ರಮುಖ ನಾಯಕರಾಗಿದ್ದ 74 ವರ್ಷದ ರಾಜಣ್ಣ ವಿಧಾನಸಭೆ ಅಧಿವೇಶನದ ಮೊದಲ ದಿನದಂದು ಯಾವುದೇ ಮುನ್ಸೂಚನೆ ನೀಡದೆ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಾಜೀನಾಮೆ ಹಿಂದೆ ಬಹುದೊಡ್ಡ ಪ್ರಹಸನ ನಡೆದಿತ್ತು. ಮತಗಳ್ಳತನದ ಬಗ್ಗೆ ರಾಜಣ್ಣ ಹೇಳಿಕೆ ಕಾಂಗ್ರೆಸ್ ಹೈಕಮಾಂಡ್, ವಿಶೇಷವಾಗಿ ರಾಹುಲ್ ಗಾಂಧಿಯನ್ನು ಕೆರಳಿಸಿತ್ತು. ಮಹದೇವಪುರ ವಿಧಾನಸಭಾ ಕ್ಷೇತ್ರದ ವಿವಾದಾತ್ಮಕ ಮತದಾರರ ಪಟ್ಟಿಯನ್ನು ತಮ್ಮದೆ ಪಕ್ಷದ ಸರ್ಕಾರ ರಚಿಸಿತ್ತು ಎಂದು ರಾಜಣ್ಣ ಹೇಳಿದ್ದರು. ಇದರಿಂದ ಕಾಂಗ್ರೆಸ್ ಗೆ ತೀವ್ರ ಮುಜುಗರವಾಗಿತ್ತು. ಕಾಂಗ್ರೆಸ್ ಹೈಕಮಾಂಡ್‌ಗೆ, ಇದು ಪಕ್ಷದ್ರೋಹಿ ನಡವಳಿಕೆಯಂತೆ ಭಾಸವಾಯ್ತು. ಜನತಾ ಪರಿವಾರದ ಯುಗದಿಂದಲೂ ರಾಜಣ್ಣ ಅವರ ರಾಜಕೀಯ ಮಿತ್ರರಾಗಿದ್ದ ಸಿದ್ದರಾಮಯ್ಯಗೆ, ಇದು ದೊಡ್ಡ ಮುಜುಗರವಾಗಿತ್ತು.
ಆದರೆ ರಾಜಣ್ಣ ತಮ್ಮ ರಾಜೀನಾಮೆ ನೀಡುವ ಮೊದಲೇ, ಮುಖ್ಯಮಂತ್ರಿ ಕಚೇರಿ ಸಚಿವರ ಪದಚ್ಯುತಿಗೆ ತನ್ನ ಶಿಫಾರಸನ್ನು ರಾಜಭವನಕ್ಕೆ ರವಾನಿಸಿತ್ತು. ರಾಜ್ಯಪಾಲರ ಕಚೇರಿಯಿಂದ ಬಂದ ಒಂದು ಪ್ರಕಟಣೆ ಅವರ ಭವಿಷ್ಯವನ್ನೇ ಅತಂತ್ರ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸಂಪುಟದಿಂದ ವಜಾಗೊಳಿಸಲಾಗಿತ್ತು. ಇದು ರಾಜೀನಾಮೆ ಅಲ್ಲ ಬದಲಿಗೆ ಸಂಪುಟದಿಂದ ವಜಾಗೊಳಿಸಿದ್ದಾಗಿ ಸ್ಪಷ್ಟ ಸಂದೇಶ ರವಾನಿಸಿತ್ತು.
ಈ ಹಿಂದೆಯೇ ರಾಜಣ್ಣ ಅವರನ್ನು ವಜಾಗೊಳಿಸಬೇಕಿತ್ತು, ಆದರೆ ಸಿದ್ದರಾಮಯ್ಯ ಶ್ರೀರಕ್ಷೆಯಿಂದ ಬಚಾವಾಗಿದ್ದರು. ಈ ವರ್ಷದ ಆರಂಭದಲ್ಲಿ, ತಮ್ಮನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಆರೋಪಿಸಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಿತು , ಅವರ ವಿರುದ್ಧ ಹೈಕಮಾಂಡ್ ಗೆ ದೂರು ನೀಡಲಾಗಿತ್ತು. ಸಿದ್ದರಾಮಯ್ಯ ಅವರೊಂದಿಗಿನ ಅವರ ದೀರ್ಘಕಾಲದ ಬಾಂಧವ್ಯದಿಂದ ಆಗ ರಕ್ಷಿಸಲ್ಪಟ್ಟರು. ಆದರೆ ಈ ಬಾರಿ ಅದು ಸಾಕಾಗಲಿಲ್ಲ. ರಾಜಣ್ಣ ಅವರನ್ನು ಪದಚ್ಯುತಗೊಳಿಸಿದ್ದರಿಂದ, ರಾಜ್ಯ ಸಚಿವ ಸಂಪುಟದಲ್ಲಿ ಕೇವಲ ಒಬ್ಬ ಎಸ್‌ಟಿ ನಾಯಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉಳಿದಿದ್ದಾರೆ.
ವಾಲ್ಮೀಕಿ ಕಾರ್ಪೊರೇಷನ್ ಭ್ರಷ್ಟಾಚಾರ ಹಗರಣ ಹಿನ್ನೆಲೆಯಲ್ಲಿ ಸುಮಾರು 14 ತಿಂಗಳ ಹಿಂದೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ನೀಡಿದ್ದಾರೆ. ಈಗ ರಾಜಣ್ಣ ರಾಜಿನಾಮೆ ಈಗಾಗಲೇ ರಾಜಕೀಯವಾಗಿ ಪ್ರಮುಖ ಎಸ್‌ಟಿ ಜನಸಂಖ್ಯೆಯನ್ನು ಕೆರಳಿಸಿದೆ. ವಿಶೇಷವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಗಡಿಯಲ್ಲಿರುವ ಜಿಲ್ಲೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ.
ರಾಜಣ್ಣಶೇ. 15-20 ರಷ್ಟು ಜನಸಂಖ್ಯೆ ಹೊಂದಿರುವ ನಾಯಕ್ ಸಮುದಾಯದ ಮುಖಂಡ. 15 ಪ್ರಮುಖ ವಿಧಾನಸಭಾ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್‌ಗಳು ಮತ್ತು ಬಿಬಿಎಂಪಿ ಚುನಾವಣೆಗಳು ಹತ್ತಿರದಲ್ಲಿವೆ, ರಾಜಣ್ಣ ವಜಾದಿಂದ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಲೆ ತೆರಲಿದೆಯೇ ಎಂದು ಕಾದು ನೋಡಬೇಕಾಗಿದೆ.
ರಾಜಣ್ಣ ಅವರ ಪಾಲಿಗೆ ಎಲ್ಲವೂ ಮುಗಿದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅವರು ಈಗಾಗಲೇ ತಮ್ಮ ಮುಂದಿನ ನಡೆಯ ಬಗ್ಗೆ ತಂತ್ರ ರೂಪಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ. ರಾಜಣ್ಣ ಒಂದು ವರ್ಷದೊಳಗೆ ಸದ್ದಿಲ್ಲದೆ ಸಂಪುಟಕ್ಕೆ ಮರಳಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ