ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಆಪ್ತ ಕೆ.ಎನ್. ರಾಜಣ್ಣ ಭೇಟಿ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳನ್ನು ಹುಟ್ಟುಹಾಕಿದ್ದು, ಈ ನಡುವಲ್ಲೇ ಈ ಭೇಟಿ ಕುರಿತು ರಾಜಣ್ಣ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ಸಿ ಕೆ.ಎನ್.ರಾಜೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಪಕ್ಷದ ಸದಸ್ಯರಾದ ರಾಜಣ್ಣ ಅವರನ್ನು ಭೇಟಿಯಾಗುವುದು ಸಹಜ. ಯಾವುದೇ ಪ್ರಮುಖ ವಿಚಾರಗಳಿದ್ದಾಗ ಈ ರೀತಿಯ ಭೇಟಿಗಳು ನಡೆಯಬಹುದು. ಭೇಟಿ ವೇಳೆ ನಡೆದ ಚರ್ಚೆ ಬಗ್ಗೆ ತನಗೆ ಮಾಹಿತಿ ಇಲ್ಲ, ಏಕೆಂದರೆ ಇದು ಖಾಸಗಿ ಭೇಟಿ ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರದಲ್ಲಿ ರಾಜಣ್ಣ ಅವರ ನಿಲುವು ಸ್ಪಷ್ಟವಾಗಿದೆ. ಸಿದ್ದರಾಮಯ್ಯನವರ ಪರ ಗಟ್ಟಿಯಾಗಿ ನಿಂತಿದ್ದಾರೆ. ತಮ್ಮ ಹಿಂದಿನ ಮಾತಿಗೆ ಬದ್ಧರಾಗಿರುವುದಾಗಿ ರಾಜಣ್ಣ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಅವರಂತಹ ಸಿದ್ದರಾಮಯ್ಯ ಆಪ್ತರನ್ನು ಭೇಟಿಯಾಗುವುದು ಪಕ್ಷದ ಅಧ್ಯಕ್ಷರಾಗಿ ಸಹಜವಾದ ಪ್ರಕ್ರಿಯೆ. ಅದಕ್ಕೆ ಅತಿಯಾದ ಮಹತ್ವ ನೀಡುವ ಅಗತ್ಯವಿಲ್ಲ. ಇದು ವಿಶ್ವಾಸ ಗಳಿಸುವ ಪ್ರಯತ್ನದ ಭಾಗವಲ್ಲ, ಬದಲಾಗಿ ಸಾಮಾನ್ಯ ರಾಜಕೀಯ ಮಾತುಕತೆ ಎಂದು ತಿಳಿಸಿದರು.
ಇದೇ ವೇಳೆ, ಪಕ್ಷದ ಅಭ್ಯರ್ಥಿಗಳ ಗೆಲುವನ್ನು ಜನತೆ ತೀರ್ಮಾನಿಸುತ್ತಾರೆ. ಅದರ ಬಳಿಕ ಪಕ್ಷವು ಅವರಿಗೆ ಹುದ್ದೆಗಳು ಮತ್ತು ಜವಾಬ್ದಾರಿಗಳನ್ನು ನೀಡುತ್ತದೆ ಎಂದು ಹೇಳಿದರು.