ಗದಗ: ರಾಜ್ಯದಲ್ಲಿ ಯಾವ ಕುದುರೆ ವ್ಯಾಪಾರವೂ ನಡೆಯುತ್ತಿಲ್ಲ ಎಂದು ಸಚಿವ ಎಚ್.ಕೆ. ಪಾಟೀಲ್ ಅವರು ಭಾನುವಾರ ಹೇಳಿದ್ದಾರೆ.
ಶಾಸಕ ಕಾಶಪ್ಪನವರ್ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಬೆಳವಣಿಗೆಗಳ ಬಗ್ಗೆ ಶಾಸಕ ಕಾಶಪ್ಪನವರ್ ಅವರ ಹೇಳಿಕೆಯನ್ನು ನಾನು ನೋಡಿದ್ದೇನೆ. ನನ್ನ ಅಭಿಪ್ರಾಯದ ಪ್ರಕಾರ, ಶಾಸಕರನ್ನು ವ್ಯಾಪಾರ ಮಾಡಲಾಗುತ್ತಿದೆ ಎಂದು ನಾನು ಭಾವಿಸುವುದಿಲ್ಲ. ಅದಕ್ಕೆ ಯಾವುದೇ ಅವಕಾಶವೂ ಇಲ್ಲ. ನಮ್ಮ ಸರ್ಕಾರ ಐದು ವರ್ಷಗಳ ಅಧಿಕಾರದಲ್ಲಿರಲಿದೆ ಎಂದು ಹೇಳಿದರು.
ರಾಜ್ಯದ ಜನರು ಗ್ಯಾರಂಟಿ ಯೋಜನೆಗಳನ್ನು ದ್ವೇಷಿಸುತ್ತಿದ್ದಾರೆಂಬ ರಂಭಾಪುರಿ ಶ್ರೀಗಳ ಹೇಳಿಕೆಯ ಕುರಿತು ಮಾತನಾಡಿ, ಭಾರತೀಯರು ಮತ್ತು ದೇಶಭಕ್ತರು ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸುವುದಿಲ್ಲ. ಯೋಜನೆ ಶ್ರೀಮಂತರನ್ನು ತಲುಪುತ್ತಿದ್ದರೆ, ಅದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ವದಂತಿಗಳು ಮತ್ತು ಊಹಾಪೋಹಗಳು ಸುದ್ದಿಯಾಗಬಾರದು. ನಾವು ಬಡತನವನ್ನು ಶೇ.100 ಬೇರುಸಹಿತ ನಿರ್ಮೂಲನೆ ಮಾಡಿದ್ದೇವೆ, ಶೇ.98.5ರಷ್ಟು ಜನರು ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಶಕ್ತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳು 100ರಷ್ಟು ಫಲಾನುಭವಿಗಳನ್ನು ತಲುಪಿವೆ. ನಮ್ಮ ಸರ್ಕಾರ ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ ಎಂದರು.
ದೇವನಹಳ್ಳಿಯ ರೈತರು ನಡೆಸಿದ ಪ್ರತಿಭಟನೆಯ ಕುರಿತು ಮಾತನಾಡಿದ ಅವರು, ರೈತರು ಕರೆದಿದ್ದ ಸಭೆಗೆ ನಾನು ಹಾಜರಾಗಲು ಸಾಧ್ಯವಾಗಲಿಲ್ಲ. ಈ ಯೋಜನೆಯನ್ನು ಪ್ರಸ್ತಾಪಿಸಿದವರು ಕೈಗಾರಿಕಾ ಅಭಿವೃದ್ಧಿಗೆ ಎಷ್ಟು ಭೂಮಿ ಬೇಕು ಎಂಬುದನ್ನು ಯೋಚಿಸಬೇಕು. ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಕುರಿತು ನ್ಯಾಯಮೂರ್ತಿ ಮೈಕೆಲ್ ಡಿ'ಕುನ್ಹಾ ಅವರ ವರದಿಯ ಕುರಿತು ಪ್ರಹ್ಲಾದ್ ಜೋಶಿ ಅವರ ಹೇಳಿಕೆಯ ಕುರಿತು ಮಾತನಾಡಿ, ಜೋಶಿ ಅವರು ವರದಿಯನ್ನು ಓದಿಲ್ಲ ಎಂದೆನಿಸುತ್ತಿದೆ. ಕೇಂದ್ರ ಸಚಿವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.