ಬೆಂಗಳೂರು: ವಿಧಾನಸೌಧ ಮುಂದೆ ಯುವಕರ ಗುಂಪೊಂದು ಮಾರಾಮಾರಿ ನಡೆಸಿದ ಘಟನೆ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಅಧಿಕಾರದಲ್ಲಿ ಕರ್ನಾಟಕವು ಗೂಂಡಾರಾಜ್ಯವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಈ ಹಿಂದೆ ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಈಗ, ವಲಸಿಗರ ಗುಂಪು ಯಾರ ಭಯವಿಲ್ಲದೆ ವಿಧಾನಸೌಧದ ಮುಂದೆಯೇ ಹೊಡೆದಾಡುತ್ತಿದೆ. ಇದು ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಕೈಗನ್ನಡಿಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಕರ್ನಾಟಕವು ಗೂಂಡಾರಾಜ್ಯವಾಗುತ್ತಿದೆ ಎಂದು ಕಿಡಿಕಾರಿದೆ.
ವಿಧಾನಸೌಧ ಮುಂದೆ ಯುವಕರ ಗುಂಪೊಂದು ಹೊಡೆದಾಟ ನಡೆಸಿದ್ದು, ಗಲಾಟೆ, ಹಲ್ಲೆ ನೋಡಿ ಸ್ಥಳದಲ್ಲಿದ್ದ ಜನರು ಆತಂಕಗೊಂಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೊಡೆದಾಟದ ವೇಳೆ ಯುವಕರ ಗುಂಪು ಹೆಲ್ಮೆಟ್ ಸೇರಿದಂತೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಯುವಕರಿಗೆ ಲಾಟಿ ರುಚಿ ತೋರಿಸಿ, ಯುವಕರು ಕಾಲ್ಕಿತ್ತುವಂತೆ ಮಾಡಿದ್ದಾರೆ.