ದಾವಣಗೆರೆ: ನಾನು AK 47 ಥರ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರ ಅವರನ್ನು ಬದಲಾವಣೆ ಮಾಡದಿದ್ದರೆ ಹೊಸ ಪಕ್ಷ ಕಟ್ಟುತ್ತೇನೆ. ಹಿಂದೂಗಳ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶುಕ್ರವಾರ ಹೇಳಿದ್ದಾರೆ. ಭವಿಷ್ಯ
ಇಂದು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ ಅವರು, ರಾಜ್ಯದಲ್ಲಿ ವಿಜಯೇಂದ್ರ ಬಿಜೆಪಿ ಚುಕ್ಕಾಣಿ ಹಿಡಿದ ನಂತರ ಪಕ್ಷ ದುರ್ಬಲವಾಗಿದೆ. ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದೆ. ಹೀಗಾಗಿ ವಿಜಯೇಂದ್ರ ಬದಲಾವಣೆಗೆ ನಾಯಕರು ಪಟ್ಟು ಹಿಡಿದಿದ್ದಾರೆ ಎಂದರು.
ರಾಜ್ಯದಲ್ಲಿ ಹಿಂದುತ್ವದ ಅಲೆ ಎದ್ದಿದೆ. ನಿರೀಕ್ಷೆಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಜೆಸಿಬಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ. ಬಿಜೆಪಿಯಲ್ಲಿ ನಿಷ್ಠಾವಂತರೆಲ್ಲರನ್ನೂ ನಮ್ಮ ಪಾರ್ಟಿಗೆ ಕರೆದುಕೊಂಡು ಬರ್ತೀನಿ. ವಿಜಯೇಂದ್ರ ನಾಲ್ಕು ಜನ ಚೇಲಾಗಳನ್ನು ಇಟ್ಕೊಂಡು ಸುತ್ತುವರಿಯುತ್ತಾನೆ. ಚೇಲಾಗಳನ್ನೆೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಜೈ ಜೈ ಎನ್ನಿಸಿಕೊಳ್ಳುತ್ತಾನೆ. ಕಾರಿನ ಡಿಕ್ಕಿಯಲ್ಲಿ ಶಾಲು ತೆಗೆದುಕೊಂಡು ಹೋಗಿ ಬೊಮ್ಮಾಯಿ ಬಳಿ ಸನ್ಮಾನ ಮಾಡಿಸಿಕೊಂಡಿದ್ದಾನೆ. ಬಳಿಕ ಬೊಮ್ಮಾಯಿ ಶಹಬ್ಬಾಶ್ ಅಂದ್ರು ಅಂತಾ ಚೇಲಾಗಳಿಂದ ಹೇಳಿಕೆ ಕೊಡಿಸುತ್ತಾನೆ. ಸುದೀರ್ಘ ಚರ್ಚೆ ಮಾಡಲಾಯಿತು ಎಂದು ಬರೆದುಕೊಳ್ಳುತ್ತಾನೆ. ಇತ್ತ ಡಿಕೆಶಿ ಜೋಡಿ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ನಮ್ಮ ಫೈಲ್ ಮುಟ್ಟಬೇಡಿ, ಫೋಕ್ಸೋದಿಂದ ನಮ್ಮ ಅಪ್ಪನನ್ನು ಬಚಾವ್ ಮಾಡಿ ಎಂದು ಹೊಂದಾಣಿಕೆ ಮಾಡಿಕೊಂಡಿದ್ದಾನೆ ಎಂದು ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಬದಲಾವಣೆ ಸಾಧ್ಯವಿಲ್ಲ, ಡಿಕೆಶಿ ಸಿಎಂ ಆಗಲ್ಲ
ಇನ್ನು ಸಿದ್ದರಾಮಯ್ಯ ಬದಲಾವಣೆ ಸಾಧ್ಯವಿಲ್ಲ, ಡಿಕೆಶಿ ಸಿಎಂ ಆಗೋದಿಲ್ಲ ಎಂದು ಯತ್ನಾಳ್ ಭವಿಷ್ಯ ನುಡಿದರು.
ಖರ್ಗೆ ಸಿಎಂ ಆಗ್ತಾರೆ
ಇತ್ತ ಖರ್ಗೆ ನನ್ನ ಹೆಸರು ಯಾರೂ ಹೇಳ್ತಿಲ್ಲ ಅಂತಾ ಯೋಚನೆ ಮಾಡುತ್ತಿದ್ದಾರೆ. ಹೊಸ ಕಾರ್ಡ್ ಪ್ಲೇ ಆಗುತ್ತದೆ ನೋಡ್ತಿರಿ. ಸಿದ್ದರಾಮಯ್ಯ ಮುಂದುವರೆಯದಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗ್ತಾರೆ ಎಂದರು.
ಡಿಕೆಶಿ ಸಿಎಂ ಆಗಲ್ಲ
ವಿಜಯೇಂದ್ರ ಆತ್ಮೀಯ ಗೆಳೆಯ ಡಿಕೆಶಿ ಸಿಎಂ ಆಗಲ್ಲ, ಡಿಕೆಶಿ ಬಿಜೆಪಿಗೆ ಬಂದು ಸಿಎಂ ಆಗಿ ವಿಜಯೇಂದ್ರ ಡಿಸಿಎಂ ಆದ್ರೆ ಕರ್ನಾಟಕ ಉಳಿಯಲ್ಲ. ಗಾಳಿ, ನೀರು, ಗುಡ್ಡ, ಬೆಟ್ಟ ಬಂದ್ ಆಗುತ್ತವೆ. ಇವರನ್ನು ಕೇಳಿ ಉಸಿರಾಡಬೇಕಾಗುತ್ತದೆ. ಗಾಳಿ, ನೀರನ್ನು ಖರೀದಿ ಮಾಡಿಬಿಡ್ತಾರೆ. ಉಸಿರಾಡೋಕೂ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ಭ್ರಷ್ಟಾಚಾರದಿಂದ ಗುಡ್ಡ, ಬೆಟ್ಟ ಉಳಿಯಲ್ಲ, ಈಗಾಗಲೇ ಕನಕಪುರ ಖಾಲಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಹಾರದಲ್ಲಿ ನಿತೀಶ್ ಅಂತಾ ಒಳ್ಳೆಯ ಲೀಡರ್. ಹೀಗಾಗಿ ಅಧಿಕಾರಕ್ಕೆ ಬಂದಿದೆ. ಬಿಹಾರದಲ್ಲಿ ಗೆದ್ದಿದ್ದೇವೆ, ಕರ್ನಾಟಕದಲ್ಲೂ ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ, ಆದ್ರೆ ಆಗಲ್ಲ. ಭ್ರಷ್ಟ ಯಡಿಯೂರಪ್ಪ ಕುಟುಂಬ ಇದ್ರೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ನಾನು ನಿತೀಶ್ ಕುಮಾರ್ ಆಗಲ್ಲ. ಯೋಗಿ ಆದಿತ್ಯನಾಥ್ ಆಗುತ್ತೇನೆ ಎಂದರು.